ಕಠ್ಮಂಡು: ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಭಾರೀ ದುರಂತ ಸಂಭವಿಸಿದೆ.
ದಿನದಿಂದ ದಿನಕ್ಕೆ ಮೃತರ ಸಂಖ್ಯೆ ಹೆಚ್ಚುತ್ತಿದ್ದು, ಹಲವು ಪ್ರದೇಶಗಳಲ್ಲಿ ಮೃತದೇಹಗಳು ಪತ್ತೆಯಾಗುತ್ತಿವೆ. ಸದ್ಯ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 675ಕ್ಕೆ ಏರಿಕೆಯಾಗಿದೆ. ಇನ್ನೂ 2,400ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ಅವರನ್ನು ಪತ್ತೆಹಚ್ಚುವ ಕಾರ್ಯ ಭರದಿಂದ ಸಾಗಿದೆ.
ಪ್ರವಾಹದಿಂದ ತೀವ್ರ ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಅವಶೇಷಗಳು ಹಾಗೂ ಪ್ರವಾಹದ ನೀರಿನ ನಡುವೆ ಸಿಲುಕಿರುವವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಈ ನಡುವೆ ನೇಪಾಳದಲ್ಲಿ ಸಿಲುಕಿದ್ದ 108 ಭಾರತೀಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಇನ್ನೂ 330ಕ್ಕೂ ಅಧಿಕ ಭಾರತೀಯರು ಸಂಪರ್ಕಕ್ಕೆ ಸಿಗದೆ ಇರುವುದರಿಂದ ಅವರ ಪತ್ತೆಗಾಗಿ ಪ್ರಯತ್ನ ಮುಂದುವರಿದಿದೆ. ಚೀನಾದಲ್ಲೂ ಸುಮಾರು 400 ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಬೆಂಗಳೂರಿಗೆ ಮರಳಿದ 54 ಕನ್ನಡಿಗರು:
ನೇಪಾಳ ಪ್ರವಾಸಕ್ಕೆ ತೆರಳಿದ್ದ 54 ಕನ್ನಡಿಗರು ಸುರಕ್ಷಿತವಾಗಿ ಬೆಂಗಳೂರಿಗೆ ಮರಳಿದ್ದಾರೆ. ದುರಂತಕ್ಕೂ ಮುನ್ನ ತಾವು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾಗಿ ಪ್ರವಾಸಿಗರೊಬ್ಬರು ತಿಳಿಸಿದ್ದಾರೆ.
“ನಾವು ಪ್ರವಾಹದ ಹಿಂದಿನ ದಿನವೇ ಆ ಸ್ಥಳಕ್ಕೆ ಭೇಟಿ ನೀಡಿದ್ದೆವು. ನಾವು ಅಲ್ಲಿ ಇದ್ದಿದ್ದರೆ ವಾಶ್‌ಔಟ್ ಆಗುತ್ತಿದ್ದೆವು” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ನೇಪಾಳದಲ್ಲಿ ಕಂಡುಬಂದ ಭೀಕರ ಪರಿಸ್ಥಿತಿಯ ಬಗ್ಗೆ ವಿವರಿಸಿದ ಅವರು, ಹಲವು ಕಡೆ ಗುಡ್ಡ ಕುಸಿತ ಸಂಭವಿಸಿದ್ದು, ಮಂಜು ಕರಗಿ ನೀರಿನ ಪ್ರಮಾಣ ಹೆಚ್ಚಾಗಿತ್ತು ಎಂದು ತಿಳಿಸಿದ್ದಾರೆ.
ಸದ್ಯ ನೇಪಾಳದ ವಿವಿಧ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ನಾಪತ್ತೆಯಾಗಿರುವವರ ಪತ್ತೆಗಾಗಿ ಅಧಿಕಾರಿಗಳು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ದುರಂತದಿಂದಾಗಿ ಹಲವು ಪ್ರದೇಶಗಳಲ್ಲಿ ಭಯ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿದೆ.



