ಬೆಂಗಳೂರು: ಮಾಜಿ ಸಚಿವ ಬಿ. ನಾಗೇಂದ್ರ ಅವರ ಸವಾಲನ್ನು ಸ್ವೀಕರಿಸಿರುವ ಬಿಜೆಪಿ ನಾಯಕ, ಮಾಜಿ ಸಚಿವ ಶ್ರೀರಾಮುಲು, 2028ರ ಚುನಾವಣೆಯಲ್ಲಿ ನಾಗೇಂದ್ರ ಎಲ್ಲಿ ಸ್ಪರ್ಧಿಸುತ್ತಾರೋ ತಾವೂ ಅಲ್ಲಿಯೇ ಸ್ಪರ್ಧಿಸುವುದಾಗಿ ಪ್ರತಿಸವಾಲು ಹಾಕಿದ್ದಾರೆ.
ಶನಿವಾರ ಪಕ್ಷದ ಮಲ್ಲೇಶ್ವರಂ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀರಾಮುಲು, “2028ಕ್ಕೆ ನಾಗೇಂದ್ರ ಎಲ್ಲಿ ಸ್ಪರ್ಧಿಸುತ್ತಾರೋ ನಾನೂ ಅಲ್ಲೇ ನಿಲ್ಲುತ್ತೇನೆ. ಒಬ್ಬ ಭ್ರಷ್ಟಾಚಾರಿ ವಿರುದ್ಧ ಈಗ ನಾನೇಕೆ ಸ್ಪರ್ಧಿಸಲಿ? ಮುಂದಿನ ಚುನಾವಣೆಗೆ ಅವರು ಬರಲಿ” ಎಂದು ಹೇಳಿದರು. ಈ ಭ್ರಷ್ಟಾಚಾರದ ಹಣದಿಂದಲೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಲವರು ಗೆದ್ದಿದ್ದಾರೆ ಎಂದು ಆರೋಪಿಸಿದ ಅವರು, ತುಕಾರಾಂ, ಖರ್ಗೆ ಅಳಿಯ ಹಾಗೂ ಬೀದರ್ ಸಂಸದರು ಇದೇ ಹಣದಿಂದ ಗೆದ್ದವರು ಎಂದು ಆರೋಪ ಮಾಡಿದರು.
ಜನತಾ ನ್ಯಾಯಾಲಯಕ್ಕೆ ಬರುವಂತೆ ನಾಗೇಂದ್ರ ನೀಡಿರುವ ಸವಾಲಿಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, “ಸರ್ಕಾರ ವಜಾಗೊಳಿಸಿ ಅವರು ಬರಲಿ, ನಾವೂ ಈಗಲೇ ಜನತಾ ನ್ಯಾಯಾಲಯಕ್ಕೆ ಬರಲು ಸಿದ್ಧ” ಎಂದು ತಿರುಗೇಟು ನೀಡಿದರು. ಚುನಾವಣೆ ಸಂದರ್ಭದಲ್ಲೇ ಎದುರಿಸುವುದಾಗಿ ಹೇಳಿದ ಅವರು, ಈಗಾಗಲೇ ಜನತಾ ನ್ಯಾಯಾಲಯ ತೀರ್ಪು ನೀಡಿದ್ದು, ಸೋತಿರುವುದು ನಿಜವಾದರೂ ಮುಂದೆ ಮತ್ತೆ ಜನ ಕೈಹಿಡಿಯುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿ, ನಾಗೇಂದ್ರಗೆ ಇಷ್ಟೊಂದು ಅವಸರವೇಕೆ ಎಂದು ಪ್ರಶ್ನಿಸಿದರು.
ಒಂದೇ ವಿಚಾರದಲ್ಲಿ ಎರಡು ಬಾರಿ ರಾಜೀನಾಮೆ ನೀಡಿರುವುದು ಇದೇ ಮೊದಲ ಬಾರಿ ಎಂದ ಶ್ರೀರಾಮುಲು, ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ನಿಗಮದಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಒಪ್ಪಿಕೊಂಡಿದ್ದರು ಎಂದು ನೆನಪಿಸಿದರು. ಲೋಕಸಭೆ ಚುನಾವಣೆಗೆ ನಿಗಮದ ಹಣ ಬಳಕೆಯಾಗಿದ್ದು, ಸದನದಲ್ಲಿ ಸಿಎಂ ನಾಗೇಂದ್ರ ಪರ ಸಮರ್ಥನೆ ಮಾಡಿಕೊಳ್ಳಲಿಲ್ಲ ಎಂದೂ ಆರೋಪಿಸಿದ ಅವರು, ನಾಗೇಂದ್ರ ರಾಜೀನಾಮೆಯನ್ನು ಡಿಕೆ ಶಿವಕುಮಾರ್ ಬಯಸಿದ್ದರಿಂದಲೇ ಸದನದಲ್ಲಿ ಯಾವುದೇ ಸಮರ್ಥನೆ ಮಾಡಿಕೊಳ್ಳಲಿಲ್ಲ ಎಂದು ಆರೋಪಿಸಿದರು.
ನಾಗೇಂದ್ರ ಅವರ ಕಣ್ಣೀರಿನ ಪ್ರತಿಕ್ರಿಯೆಗೆ ತಿರುಗೇಟು ನೀಡಿದ ಶ್ರೀರಾಮುಲು, “ನಾವೇನು ನಿಮ್ಮ ಮಂತ್ರಿ ಸ್ಥಾನ ಕಸಿದುಕೊಂಡೆವಾ? ತಪ್ಪು ಮಾಡಿ ರಾಜೀನಾಮೆ ಕೊಟ್ಟಿರಿ, ವಿಪಕ್ಷವಾಗಿ ಸಮುದಾಯಕ್ಕಾಗಿ ಹೋರಾಟ ಮಾಡಿದ್ದೇವೆ” ಎಂದರು. ನಾಗೇಂದ್ರ ‘ಮನುವಾದಿಗಳು’ ಎಂದು ಆಪಾದಿಸಿದ್ದಕ್ಕೆ ಪ್ರತಿಕ್ರಿಯಿಸಿ, 2013ರಲ್ಲಿ ನಾಗೇಂದ್ರ ಗೆದ್ದಾಗ ಇದೇ ‘ಮನುವಾದಿಗಳೇ’ ಜೊತೆಗಿದ್ದರು ಎಂದು ಪ್ರಶ್ನಿಸಿ, ಇಷ್ಟೊಂದು ಕಣ್ಣೀರು ಹಾಕುವ ಅಗತ್ಯವೇನಿತ್ತು ಎಂದು ಶ್ರೀರಾಮುಲು ಟೀಕಿಸಿದರು.



