ಚಾಮರಾಜನಗರ: ಕಾವೇರಿ ವನ್ಯಧಾಮದಲ್ಲಿ ನಡೆದ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ತನಿಖಾ ವರದಿ ಸಲ್ಲಿಕೆಯಾದ ಬಳಿಕ ಇದೀಗ ಸಿಐಡಿ ತಂಡ ಎಂಟ್ರಿ ನೀಡಿದೆ.
ಎನ್‌ಕೌಂಟರ್ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದ್ದು, ತನಿಖೆಗಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಇಬ್ಬರು ಡಿವೈಎಸ್‌ಪಿಗಳು ಹಾಗೂ ಇಬ್ಬರು ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ಈ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ಸಿಐಡಿ ತಂಡ ಸ್ಥಳದಲ್ಲಿ ಬೀಡುಬಿಟ್ಟಿದೆ.
ಎನ್‌ಕೌಂಟರ್ ಹಾಗೂ ಹನೂರು, ರಾಮಾಪುರ, ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಒಟ್ಟು ನಾಲ್ಕು ಪ್ರಕರಣಗಳ ತನಿಖೆಯನ್ನು ಸಿಐಡಿ ನಡೆಸಲಿದೆ. ಈ ಕುರಿತು ಸ್ಥಳೀಯ ಪೊಲೀಸರು ಈಗಾಗಲೇ ಸಿಐಡಿಗೆ ಕೇಸ್ ಫೈಲ್ ಹಸ್ತಾಂತರಿಸಿದ್ದಾರೆ. ಡಿವೈಎಸ್‌ಪಿ ಸತೀಶ್ ಚಿಟಗುಬ್ಬಿ, ಡಿವೈಎಸ್‌ಪಿ ಡಿ.ಎಸ್. ರಾಜೇಂದ್ರ, ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಪಿ. ಗೋಪಾಲ್ ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ ಎಚ್.ಎನ್. ಹೊನ್ನಪ್ಪ ಅವರ ನೇತೃತ್ವದಲ್ಲಿ ಸಿಐಡಿಯ ನಾಲ್ಕು ತಂಡಗಳು ತನಿಖೆ ಕೈಗೊಳ್ಳಲಿವೆ.



