ವಾಷಿಂಗ್ಟನ್: ಅಮೆರಿಕ ವೆನೆಜುವೆಲಾದೊಂದಿಗೆ ವಿಶ್ವದ ಇತಿಹಾಸದಲ್ಲೇ ಅತಿದೊಡ್ಡ ತೈಲ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಅನ್ವಯ ವೆನೆಜುವೆಲಾದ 65 ಶತಕೋಟಿ ಬ್ಯಾರಲ್ ತೈಲ ನಿಕ್ಷೇಪಗಳ ಮೇಲೆ ಅಮೆರಿಕ ಹಿಡಿತ ಸಾಧಿಸಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಸರ್ಕಾರವನ್ನು ಅಮೆರಿಕ ಉರುಳಿಸಿದ ಬಹುದಿನಗಳ ನಂತರ ಈ ಮಹತ್ವದ ಬೆಳವಣಿಗೆ ಸಂಭವಿಸಿದೆ. ಈ ಒಪ್ಪಂದಕ್ಕಾಗಿ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮತ್ತು ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹಾಗೂ ವೆನೆಜುವೆಲಾದ ಅಧ್ಯಕ್ಷ ಡೆಲ್ಸಿ ರೊಡ್ರಿಗಸ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವುದಾಗಿಯೂ,
ಈ ಒಪ್ಪಂದ ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲಿದೆ ಎಂದೂ ಟ್ರಂಪ್ ತಿಳಿಸಿದ್ದಾರೆ. ಈ ಐತಿಹಾಸಿಕ ಒಪ್ಪಂದ ಅಮೆರಿಕದ ತೈಲ ನಿಕ್ಷೇಪಗಳ ಸಾಮರ್ಥ್ಯವನ್ನು ದ್ವಿಗುಣಗೊಳಿಸಲಿದ್ದು, ತೈಲ ಪೂರೈಕೆ ಗಣನೀಯವಾಗಿ ಹೆಚ್ಚಿಸುವ ಜೊತೆಗೆ ಭವಿಷ್ಯದಲ್ಲಿ ಪ್ರತಿಯೊಬ್ಬ ಅಮೆರಿಕನ್ನರಿಗೆ ಕಡಿಮೆ ಬೆಲೆಯಲ್ಲಿ ತೈಲ ಮತ್ತು ಅನಿಲ ದೊರಕಿಸಿಕೊಡಲು ಸಹಾಯ ಮಾಡುತ್ತದೆ ಎಂದು ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಷಿಯಲ್ನಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕಿಂತ ಮುಖ್ಯವಾಗಿ ಈ ಒಪ್ಪಂದ ವೆನೆಜುವೆಲಾವನ್ನು ಸಮೃದ್ಧಿಯತ್ತ ಸಾಗಿಸಲು ಸಹಾಯ ಮಾಡುತ್ತದೆ ಎಂದೂ, ವೆನೆಜುವೆಲಾದೊಂದಿಗಿನ ಈ ಒಪ್ಪಂದ ವಿಶ್ವ ಇತಿಹಾಸದಲ್ಲೇ ಇದುವರೆಗಿನ ಅತಿದೊಡ್ಡ ತೈಲ ಒಪ್ಪಂದ ಎಂದೂ ಅವರು ಪುನರುಚ್ಚರಿಸಿದ್ದಾರೆ.
ವೆನೆಜುವೆಲಾ ವಿಶ್ವದ ಅತಿದೊಡ್ಡ ತೈಲ ನಿಕ್ಷೇಪಗಳಲ್ಲಿ ಒಂದಾಗಿದೆ. ಅಮೆರಿಕದ ಇಂಧನ ಮಾಹಿತಿ ಆಡಳಿತದ ಅಂದಾಜಿನ ಪ್ರಕಾರ, ದಕ್ಷಿಣ ಅಮೆರಿಕದ ಈ ದೇಶ ಸುಮಾರು 303 ಶತಕೋಟಿ ಬ್ಯಾರಲ್ ಕಚ್ಚಾ ತೈಲ ಹೊಂದಿದ್ದು, ಇದು ವಿಶ್ವದ ಒಟ್ಟು ಪೂರೈಕೆಯ ಸರಿಸುಮಾರು ಶೇ.17ರಷ್ಟಿದೆ. ಆದರೆ ಕಳಪೆ ಮೂಲಸೌಕರ್ಯದಿಂದಾಗಿ ವೆನೆಜುವೆಲಾ ವಿಶ್ವದ ತೈಲದ ಸುಮಾರು ಶೇ.1ರಷ್ಟನ್ನಷ್ಟೇ ಉತ್ಪಾದಿಸುತ್ತಿದೆ. ಇದೀಗ ಹೊಸ ಒಪ್ಪಂದಗಳ ಅಡಿಯಲ್ಲಿ ಅಮೆರಿಕ ವೆನೆಜುವೆಲಾ ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸಲು ಅವಕಾಶ ನೀಡಲಿದ್ದು, ಇದಕ್ಕೆ ಪ್ರತಿಯಾಗಿ ಹೆಚ್ಚಿನ ಪಾಲನ್ನು ಅಮೆರಿಕ ಪಡೆಯಲಿದೆ ಎಂದು ತಿಳಿದುಬಂದಿದೆ.



