ಬೆಂಗಳೂರು: ನೈಸ್ ವಿರುದ್ಧ ಜೆಡಿಎಸ್ ಹೋರಾಟ ಮತ್ತೊಂದು ಹಂತಕ್ಕೆ ತಲುಪಿದೆ. ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿರುವ ಜೆಡಿಎಸ್ “ನಥಿಂಗ್ ನೈಸ್” ವೆಬ್‌ಸೈಟ್ ಬಿಡುಗಡೆ ಮಾಡಿದೆ. ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಈ ವೆಬ್‌ಸೈಟ್ ಬಿಡುಗಡೆ ಮಾಡಿದರು.
ಈ ವೆಬ್‌ಸೈಟ್‌ನಲ್ಲಿ ನೈಸ್ ಯೋಜನೆಯ ಸಂಪೂರ್ಣ ವಿವರ, ಟೋಲ್ ಏಕೆ ಕಟ್ಟಬಾರದು, ಹೈಕೋರ್ಟ್ ಆದೇಶ ಏನು ಎಂಬುದು ಸೇರಿ ನೈಸ್ ಅಕ್ರಮದ ಸಂಪೂರ್ಣ ದಾಖಲಾತಿಗಳಿರಲಿದ್ದು, ಇದರ ಮೂಲಕ ಜನರಲ್ಲಿ ಜಾಗೃತಿ ಅಭಿಯಾನ ನಡೆಸಲು ಜೆಡಿಎಸ್ ಮುಂದಾಗಿದೆ.
ವೆಬ್‌ಸೈಟ್ ಬಿಡುಗಡೆ ಬಳಿಕ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ನೈಸ್ ಸಂಸ್ಥೆಯಿಂದ 26 ವರ್ಷಗಳಿಂದ ಹಗರಣ ನಡೆದಿದೆ ಎಂದು ಆರೋಪಿಸಿದರು. ಸಾರ್ವಜನಿಕ ಹೆಸರಿನಲ್ಲಿ ನೈಸ್ ಅಭಿವೃದ್ಧಿಪಡಿಸಿಲ್ಲ, ರೈತರಿಗೆ ಪರಿಹಾರ ಸಿಕ್ಕಿಲ್ಲ, ಜನರ ಭೂಮಿ ಪಡೆದು ಅಭಿವೃದ್ಧಿ ಮಾಡಿಲ್ಲ, ನೈಸ್ ರಸ್ತೆಯಲ್ಲಿ ಓಡಾಡುವವರಿಗೆ ಸಮಸ್ಯೆಯಾಗುತ್ತಿದೆ ಎಂದು ಕಿಡಿಕಾರಿದರು.
1997ರಲ್ಲಿ ಫ್ರೇಮ್‌ವರ್ಕ್ ಅಗ್ರಿಮೆಂಟ್ ಆಗಿದ್ದರೂ ಅದರ ಉಲ್ಲಂಘನೆ ಆಗಿದೆ ಎಂದ ಅವರು, 5 ಟೌನ್‌ಶಿಪ್ ಆಗಬೇಕಿದ್ದ ಈ ಯೋಜನೆ ಇನ್ನೂ ಸಂಪೂರ್ಣವಾಗಿಲ್ಲ ಎಂದರು. 111 ಕಿ.ಮೀ ರಸ್ತೆ ಯೋಜನೆ ಪೈಕಿ ಕೇವಲ 5 ಕಿ.ಮೀ ಮಾತ್ರ ಪೂರ್ಣಗೊಂಡಿದ್ದು, 23 ವರ್ಷ ಕಳೆದರೂ ರೈತರಿಗೆ ಪರಿಹಾರ ಸಿಕ್ಕಿಲ್ಲ, ಶೇ.65-70ರಷ್ಟು ರೈತರು ಬೀದಿಯಲ್ಲಿದ್ದಾರೆ ಎಂದು ಆರೋಪಿಸಿದರು. ಜಯಚಂದ್ರ ಜಂಟಿ ಸದನ ಸಮಿತಿ ವರದಿಯಲ್ಲಿ 22 ಷರತ್ತುಗಳ ಪೈಕಿ 16 ಷರತ್ತು ಉಲ್ಲಂಘನೆಯಾಗಿದೆ ಎಂಬ ವರದಿ ಇರುವುದಾಗಿಯೂ, ಜುಲೈನಲ್ಲಿ ಹೈಕೋರ್ಟ್ ಭೂಮಿ ಕಳೆದುಕೊಂಡ ರೈತರಿಗೆ ಜಮೀನು ವಾಪಸ್ ಕೊಡಲು ಆದೇಶಿಸಿರುವುದಾಗಿಯೂ ತಿಳಿಸಿ, ಸರ್ಕಾರ ಮೌನವಾಗಿರದೆ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ, ಈ ಸರ್ಕಾರ ರಿಯಲ್ ಎಸ್ಟೇಟ್ ಪರ ಇದೆ ಎಂದೂ, ಹೊಸ ಸಿಎಂ ರಿಯಲ್ ಎಸ್ಟೇಟ್ ಫೋರಂನ ಸಿಇಒ ಆಗಿದ್ದರು ಎಂದೂ ಆರೋಪಿಸಿದ ನಿಖಿಲ್, ಸರ್ಕಾರ ನೈಸ್ ಯೋಜನೆ ಟೇಕ್ ಓವರ್ ಮಾಡಬೇಕು ಎಂದು ಒತ್ತಾಯಿಸಿದರು. ಇಂದಿನಿಂದ ಅಭಿಯಾನ ಆರಂಭಿಸುವುದಾಗಿಯೂ, ರೈತರ ಭೂಮಿ ವಾಪಸ್ ಕೊಡಿಸುವ ಕೆಲಸ ಮಾಡುವುದಾಗಿಯೂ ಹೇಳಿದ ಅವರು, ಪರಿಹಾರ ಹಣವನ್ನು ಬಡ್ಡಿ ಸಮೇತ ಕೊಡಬೇಕು ಹಾಗೂ ಟೋಲ್ ಸಂಗ್ರಹ ನಿಲ್ಲಿಸಬೇಕು ಎಂದು ಆಗ್ರಹಿಸಿದರು.



