ಬೆಂಗಳೂರು: ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಹಗರಣ ಪ್ರಕರಣದ ತನಿಖೆಯನ್ನು ಸಿಐಡಿ ಮತ್ತಷ್ಟು ಚುರುಕುಗೊಳಿಸಿದೆ.
ಪ್ರಕರಣದಲ್ಲಿ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರನ್ನು ಈಗಾಗಲೇ ಬಂಧಿಸಿರುವ ಬೆನ್ನಲ್ಲೇ, ಇನ್ನಷ್ಟು ಮಂದಿ ಬಂಧನವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದರಿಂದ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಕೆಲ ಅಧಿಕಾರಿಗಳು ಹಾಗೂ ಸದಸ್ಯರಲ್ಲಿ ಆತಂಕ ಹೆಚ್ಚಾಗಿದೆ.
ಪ್ರಕರಣದ ತನಿಖೆ ವೇಳೆ ಕೆಲ ಮಹತ್ವದ ಸಾಕ್ಷ್ಯಗಳು ಪತ್ತೆಯಾಗಿದ್ದು, ವಿಚಾರಣೆಗೆ ಜ್ಞಾನೇಂದ್ರ ಕುಮಾರ್ ಸರಿಯಾಗಿ ಸಹಕರಿಸದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಆ.28ರಂದು ರಾತ್ರಿ 11 ಗಂಟೆಯವರೆಗೂ ಸಿಐಡಿ ಅಧಿಕಾರಿಗಳು ಅವರನ್ನು ವಿಚಾರಣೆ ನಡೆಸಿದ್ದರು. ಬಳಿಕ ಆ.29ರಂದು ಕೂಡ ಮಧ್ಯರಾತ್ರಿವರೆಗೂ ವಿಚಾರಣೆ ಮುಂದುವರಿಸಿದ್ದರು ಎನ್ನಲಾಗಿದೆ.
ವಿಚಾರಣೆ ವೇಳೆ ಓಎಂಆರ್ ಶೀಟ್‌ಗಳ ತಿದ್ದುಪಡಿಯಲ್ಲಿ ಜ್ಞಾನೇಂದ್ರ ಕುಮಾರ್ ಅವರ ಕೈವಾಡವಿತ್ತು ಎನ್ನುವುದಕ್ಕೆ ಪ್ರಮುಖ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಅಭ್ಯರ್ಥಿಗಳನ್ನು ಕೆಲ ಹೋಟೆಲ್‌ಗಳು ಹಾಗೂ ರೆಸಾರ್ಟ್‌ಗಳಿಗೆ ಕರೆದೊಯ್ದು ತರಬೇತಿ ನೀಡಿದ ವಿಚಾರದಲ್ಲೂ ಅವರ ಪಾತ್ರವಿರುವ ಶಂಕೆ ಸಿಐಡಿ ಅಧಿಕಾರಿಗಳಿಗೆ ವ್ಯಕ್ತವಾಗಿದೆ ಎನ್ನಲಾಗಿದೆ.
ಇದೀಗ ಜ್ಞಾನೇಂದ್ರ ಕುಮಾರ್ ಅವರನ್ನು ಬಂಧಿಸಿರುವ ಸಿಐಡಿ, ಪ್ರಕರಣದ ಮತ್ತಷ್ಟು ಆಳಕ್ಕೆ ತೆರಳಿ ತನಿಖೆ ನಡೆಸುತ್ತಿದೆ. ಹಗರಣದಲ್ಲಿ ಇತರ ಅಧಿಕಾರಿಗಳು, ಕೆಪಿಎಸ್‌ಸಿ ಸದಸ್ಯರು ಹಾಗೂ ಪ್ರಭಾವಿಗಳ ಪಾತ್ರವಿದೆಯೇ ಎಂಬ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ.
ನಾಲ್ಕು ನೇಮಕಾತಿ ಪರೀಕ್ಷೆಗಳ ಮೇಲೂ ಸಿಐಡಿ ಕಣ್ಣು:
ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸೀಮಿತವಾಗದೆ, ಕಳೆದ ಮೂರು ವರ್ಷಗಳಲ್ಲಿ ನಡೆದ ಕೆಪಿಎಸ್‌ಸಿಯ ನಾಲ್ಕು ಪ್ರಮುಖ ನೇಮಕಾತಿ ಪರೀಕ್ಷೆಗಳ ಬಗ್ಗೆಯೂ ಸಿಐಡಿ ಮಾಹಿತಿ ಸಂಗ್ರಹಿಸಿದೆ ಎನ್ನಲಾಗಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಗಳ ಕುರಿತು ತನಿಖಾಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ.
ಈ ನಾಲ್ಕೂ ನೇಮಕಾತಿ ಪ್ರಕ್ರಿಯೆಗಳಲ್ಲೂ ಅಕ್ರಮ ನಡೆದಿರುವ ಸಾಧ್ಯತೆ ಬಗ್ಗೆ ಸಿಐಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ತನಿಖೆ ಮುಂದುವರಿದಂತೆ ಪ್ರಕರಣದಲ್ಲಿ ಇನ್ನಷ್ಟು ಹೆಸರುಗಳು ಹೊರಬರುವ ಸಾಧ್ಯತೆ ಇದೆ.



