ನವದೆಹಲಿ: ದುಬೈ-ಟೆಲ್ ಅವೀವ್ ಮಾರ್ಗದ ಫ್ಲೈದುಬೈ ವಿಮಾನದಲ್ಲಿ ಸಂಕಷ್ಟದ ನಡುವೆಯೂ ಧೈರ್ಯದಿಂದ ಕಾರ್ಯನಿರ್ವಹಿಸಿ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ಮ್ಯಾನ್‌ಕೈಂಡ್ ಫಾರ್ಮಾ ಕಂಪನಿ ₹1 ಕೋಟಿ ಬಹುಮಾನ ಘೋಷಿಸಿದೆ.
ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಧೈರ್ಯ ಮತ್ತು ಕರ್ತವ್ಯ ಪ್ರಜ್ಞೆಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಮ್ಯಾನ್‌ಕೈಂಡ್ ಫಾರ್ಮಾ ಈ ಗೌರವ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಕ್ಯಾಪ್ಟನ್ ಮಚ್ಚಾರ್ ಅವರ ಸಾಹಸವನ್ನು ಶ್ಲಾಘಿಸಿ ಅಭಿನಂದನೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ದುಬೈಯಿಂದ ಟೆಲ್ ಅವೀವ್‌ಗೆ ಸಂಚರಿಸುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಹ ಪೈಲಟ್‌ನಿಂದ ದಾಳಿ ನಡೆದಿತ್ತು ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಗಾಯಗೊಂಡಿದ್ದರು. ಆದರೂ ಪರಿಸ್ಥಿತಿಯನ್ನು ನಿಭಾಯಿಸಿ ವಿಮಾನದಲ್ಲಿದ್ದ ಸುಮಾರು 180 ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಅವರು ಕಾರ್ಯನಿರ್ವಹಿಸಿದ್ದರು ಎಂದು ವರದಿಯಾಗಿದೆ. ಬಳಿಕ ವಿಮಾನವನ್ನು ಸೌದಿ ಅರೇಬಿಯಾದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿತ್ತು.
ಕ್ಯಾಪ್ಟನ್ ಮಚ್ಚಾರ್ ಅವರ ಅಸಾಧಾರಣ ಧೈರ್ಯ, ಜವಾಬ್ದಾರಿ ಹಾಗೂ ಮಾನವೀಯತೆಯನ್ನು ಗುರುತಿಸಿ ಕೃತಜ್ಞತೆಯ ಸಂಕೇತವಾಗಿ ₹1 ಕೋಟಿ ನೀಡಲಾಗುತ್ತಿದೆ ಎಂದು ಮ್ಯಾನ್‌ಕೈಂಡ್ ಫಾರ್ಮಾ ತಿಳಿಸಿದೆ.
ಮ್ಯಾನ್‌ಕೈಂಡ್ ಫಾರ್ಮಾದ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಜುನೇಜಾ ಅವರು ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ಪತ್ರ ಬರೆದು ಅಭಿನಂದಿಸಿದ್ದಾರೆ. ಒಬ್ಬ ಭಾರತೀಯನಾಗಿ, ಇಡೀ ಜಗತ್ತಿನ ಮುಂದೆ ಭಾರತೀಯರೊಬ್ಬರು ಇಂತಹ ಧೈರ್ಯ, ಮಾನವೀಯತೆ ಮತ್ತು ಜವಾಬ್ದಾರಿಯನ್ನು ಪ್ರದರ್ಶಿಸಿರುವುದನ್ನು ಕಂಡು ಹೆಮ್ಮೆ ಎನಿಸುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ನೀವು ರಕ್ಷಿಸಿದ ಜೀವಗಳ ಮೌಲ್ಯಕ್ಕಾಗಲಿ ಅಥವಾ ಲಕ್ಷಾಂತರ ಜನರಿಗೆ ನೀಡಿದ ಸ್ಫೂರ್ತಿಗಾಗಲಿ ಯಾವುದೇ ಹಣದ ಮೊತ್ತ ಸಮನಾಗುವುದಿಲ್ಲ. ನಿಮ್ಮ ಧೈರ್ಯ ಮತ್ತು ಮಾನವೀಯತೆಯ ಕುರಿತಾದ ಗೌರವ, ಕೃತಜ್ಞತೆ ಹಾಗೂ ಮೆಚ್ಚುಗೆಯ ಸಣ್ಣ ಅಭಿವ್ಯಕ್ತಿಯಾಗಿ ಈ ಕೊಡುಗೆಯನ್ನು ನೀಡಲಾಗುತ್ತಿದೆ ಎಂದು ರಾಜೀವ್ ಜುನೇಜಾ ಪತ್ರದಲ್ಲಿ ಹೇಳಿದ್ದಾರೆ.
ತಮ್ಮ ಸ್ವಾರ್ಥಕ್ಕಿಂತ ಇತರರ ಸುರಕ್ಷತೆಗೆ ಆದ್ಯತೆ ನೀಡಿದ ಕ್ಯಾಪ್ಟನ್ ಮಚ್ಚಾರ್ ಅವರಿಗೆ ಧನ್ಯವಾದ ಸಲ್ಲಿಸಿರುವ ಜುನೇಜಾ, ಅವರ ಕಾರ್ಯ ಇಡೀ ದೇಶ ಹೆಮ್ಮೆಪಡುವಂತೆ ಮಾಡಿದೆ ಎಂದು ಕೊಂಡಾಡಿದ್ದಾರೆ.



