ಬೆಂಗಳೂರು: ಆನೇಕಲ್ ತಾಲೂಕಿನ ಹಳೆ ಚಂದಾಪುರ ಸಮೀಪದ ಪಾರ್ಕಿಂಗ್ ಲಾಟ್‌ನಲ್ಲಿ ನಿಲ್ಲಿಸಲಾಗಿದ್ದ ನಾಲ್ಕು ಖಾಸಗಿ ಬಸ್‌ಗಳು ಏಕಾಏಕಿ ಬೆಂಕಿಗಾಹುತಿಯಾಗಿರುವ ಘಟನೆ ಶನಿವಾರ ನಡೆದಿದೆ. ಒಂದೇ ಬಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಉಳಿದ ಮೂರು ಬಸ್‌ಗಳಿಗೂ ವ್ಯಾಪಿಸಿ ನಾಲ್ಕೂ ವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಅಗ್ನಿ ಅವಘಡದಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮೊದಲಿಗೆ ಒಂದು ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಬೆಂಕಿಯ ಕೆನ್ನಾಲಿಗೆ ಪಕ್ಕದಲ್ಲಿದ್ದ ಇತರ ಬಸ್‌ಗಳಿಗೂ ಹರಡಿದೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಸತತ ಪ್ರಯತ್ನದ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.
ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ನಾಲ್ಕೂ ಬಸ್‌ಗಳು ಸಂಪೂರ್ಣ ಸುಟ್ಟು ಭಾರೀ ಪ್ರಮಾಣದ ಆಸ್ತಿ ನಷ್ಟ ಉಂಟಾಗಿದೆ.
ಬಸ್‌ಗಳ ಮಾಲೀಕರ ವಿವರ ಇನ್ನೂ ಬಹಿರಂಗವಾಗಿಲ್ಲ. ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ತಾಂತ್ರಿಕ ದೋಷವೋ ಅಥವಾ ಬೇರೆ ಕಾರಣವೋ ಎಂಬ ಕುರಿತು ಪೊಲೀಸರು ಹಾಗೂ ಅಗ್ನಿಶಾಮಕ ಇಲಾಖೆ ತನಿಖೆ ಮುಂದುವರಿಸಿದ್ದಾರೆ.



