ಬೆಂಗಳೂರು: 2020ರ ಈಶಾನ್ಯ ದೆಹಲಿ ಗಲಭೆ ಪ್ರಕರಣದ ಆರೋಪಿಗಳಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಪರ ಪೋಸ್ಟರ್ ಪ್ರದರ್ಶಿಸಿದ್ದ ಯುವತಿ ವಿರುದ್ಧ ಬೆಂಗಳೂರು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಭದ್ರತಾ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ‘ಗಲಭೆ ಉದ್ದೇಶದಿಂದ ಪ್ರಚೋದನೆ’ ಆರೋಪದಡಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಶುಕ್ರವಾರ ಫ್ರೀಡಂ ಪಾರ್ಕ್ನಲ್ಲಿ ನಡೆದ ಪ್ರತಿಭಟನೆಯ ವೇಳೆ ಯುವತಿ, ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಮ್ ಪರ ಘೋಷಣೆಗಳಿದ್ದ ಪೋಸ್ಟರ್ಗಳನ್ನು ಪ್ರದರ್ಶಿಸಿದ್ದಳು. ಅಲ್ಲದೆ, ‘Ukhad Le BLR Police’ ಎಂಬ ಬರಹವಿದ್ದ ಪೋಸ್ಟರ್ ಹಿಡಿದು ಬೆಂಗಳೂರು ಪೊಲೀಸರ ವಿರುದ್ಧವೂ ಆಕ್ಷೇಪಾರ್ಹ ಸಂದೇಶ ಪ್ರದರ್ಶಿಸಿದ್ದಳು.
ಪೋಸ್ಟರ್ಗಳು ಪೊಲೀಸರ ಗಮನಕ್ಕೆ ಬಂದ ತಕ್ಷಣ ಪರಿಸ್ಥಿತಿ ಉದ್ವಿಗ್ನವಾಗದಂತೆ ಅಧಿಕಾರಿಗಳು ಅವುಗಳನ್ನು ವಶಪಡಿಸಿಕೊಂಡರು. ಸ್ಥಳದಲ್ಲಿದ್ದ ಇತರ ಪ್ರತಿಭಟನಾಕಾರರು ಹಾಗೂ ವಿದ್ಯಾರ್ಥಿಗಳು ಕೂಡ ಯುವತಿಯ ನಡೆಗೆ ಆಕ್ಷೇಪ ವ್ಯಕ್ತಪಡಿಸಿ, ಆಕೆಯನ್ನು ಪ್ರತಿಭಟನಾ ಸ್ಥಳದಿಂದ ಹೊರ ಕಳುಹಿಸಿದರು.
ಘಟನೆಗೆ ಸಂಬಂಧಿಸಿದಂತೆ ಉಪ್ಪಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪೋಸ್ಟರ್ಗಳ ಉದ್ದೇಶ, ಹಿನ್ನೆಲೆ ಹಾಗೂ ಇತರೆ ಅಂಶಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.



