ಹಾವೇರಿ: ಮಳೆ ಕೊರತೆ, ವಿದ್ಯುತ್ ವ್ಯತ್ಯಯದ ನಡುವೆಯೇ ಹಾವೇರಿ ಜಿಲ್ಲೆಯ ರೈತರಿಗೆ ಇದೀಗ ಕಳ್ಳರ ಕಾಟವೂ ಸೇರಿದೆ.
ಜಿಲ್ಲೆಯ ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ 22ಕ್ಕೂ ಹೆಚ್ಚು ರೈತರ ಜಮೀನಿನಲ್ಲಿದ್ದ ಬೋರ್ವೆಲ್ ಕೇಬಲ್ ಹಾಗೂ ಇತರೆ ಕೃಷಿ ಉಪಕರಣಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.
ರಸ್ತೆ ಬದಿಯಲ್ಲಿರುವ ಜಮೀನುಗಳನ್ನು ಗುರಿಯಾಗಿಸಿಕೊಂಡ ಖದೀಮರು, ಬೋರ್ವೆಲ್ ಕೇಬಲ್ಗಳು ಮತ್ತು ಬಿಡಿಭಾಗಗಳನ್ನು ಕದ್ದು ಪರಾರಿಯಾಗಿದ್ದು, ಸುಮಾರು ₹5 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಕಳುವಾಗಿವೆ ಎಂದು ಅಂದಾಜಿಸಲಾಗಿದೆ.
ಈ ವರ್ಷ ಮಳೆ ಕೊರತೆಯಿಂದ ಬೆಳೆ ಉಳಿಸಿಕೊಳ್ಳಲು ರೈತರು ಹಗಲು-ರಾತ್ರಿ ನೀರು ಹರಿಸುವ ಕೆಲಸದಲ್ಲಿ ತೊಡಗಿದ್ದಾರೆ. ಇಂತಹ ಸಂದರ್ಭದಲ್ಲಿ ಕಳ್ಳತನ ನಡೆದಿರುವುದು ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಕರಿಯಪ್ಪ ಅಣ್ಣಿ, ನಾಗರಾಜ ಮೊಟೇಬೆನ್ನೂರು, ರೇವಣಸಿದ್ದಪ್ಪ ವಾಳದ, ಸಿದ್ದಮ್ಮ, ಶಂಕ್ರಪ್ಪ, ಭರಮಪ್ಪ, ಮರಲಿಂಗಪ್ಪ, ತಿರಕಪ್ಪ, ಬಸವರಾಜ, ಹೊಳಲಪ್ಪ, ದುಂಡಪ್ಪ ಸೇರಿದಂತೆ 22ಕ್ಕೂ ಹೆಚ್ಚು ರೈತರು ಕಳ್ಳತನಕ್ಕೆ ಒಳಗಾಗಿದ್ದಾರೆ.
“ನಾವು ಹೇಗೆ ಜೀವನ ಮಾಡಬೇಕು?” ಎಂದು ರೈತ ಶಂಕ್ರಪ್ಪ ಅಳಲು ತೋಡಿಕೊಂಡಿದ್ದಾರೆ.
ಇನ್ನೋರ್ವ ರೈತ ನಶೀರ್ ಖಾನ್ ಮಾತನಾಡಿ, “ಮತ್ತೆ ₹20ರಿಂದ ₹30 ಸಾವಿರ ಖರ್ಚು ಮಾಡಿ ಕೇಬಲ್ ಹಾಕಿಸಿಕೊಳ್ಳಬೇಕಾಗಿದೆ. ಮಳೆ ಇಲ್ಲ, ಬೆಳೆ ಒಣಗುತ್ತಿದೆ, ವಿದ್ಯುತ್ ಸರಿಯಾಗಿ ಸಿಗುತ್ತಿಲ್ಲ. ಇದರ ನಡುವೆ ಕಳ್ಳತನದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೊಲೀಸರು ಶೀಘ್ರ ಆರೋಪಿಗಳನ್ನು ಬಂಧಿಸಿ ರೈತರಿಗೆ ನ್ಯಾಯ ಒದಗಿಸಬೇಕು,” ಎಂದು ಆಗ್ರಹಿಸಿದರು.
ಕರ್ಜಗಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಕೃಷಿ ಉಪಕರಣಗಳ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದು, ಶೀಘ್ರದಲ್ಲೇ ಕಳ್ಳರನ್ನು ಬಂಧಿಸಿ ರೈತರಿಗೆ ನ್ಯಾಯ ಒದಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.



