ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಪ್ರಮುಖ ಕ್ರೀಡಾ ತಾಣವಾಗಿರುವ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ ನಿರ್ಮಿಸಲಾಗುತ್ತಿರುವ ಸಿಂಥೆಟಿಕ್ ಟರ್ಫ್ ಫುಟ್ಬಾಲ್ ಮೈದಾನ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ ಮಾಜಿ ಹಾಗೂ ಹಾಲಿ ಕ್ರೀಡಾಪಟುಗಳು ಹಾಗೂ ವಿವಿಧ ಕ್ರೀಡಾ ಸಂಘಟನೆಗಳ ಆಶ್ರಯದಲ್ಲಿ ಬುಧವಾರ ಜಿಲ್ಲಾ ಕ್ರೀಡಾಂಗಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
ಬಹುಉದ್ದೇಶದ ಕ್ರೀಡಾಂಗಣದಲ್ಲಿ ಟರ್ಫ್ ನಿರ್ಮಿಸುವುದರಿಂದ ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಲಭ್ಯವಿರುವ ಸ್ಥಳಾವಕಾಶ ಕಡಿಮೆಯಾಗಲಿದೆ. ಇಲ್ಲಿ ದಸರಾ ಕ್ರೀಡಾಕೂಟ, ಸರ್ಕಾರಿ ನೌಕರರ ಕ್ರೀಡಾಕೂಟ, ಶಾಲಾ-ಕಾಲೇಜುಗಳ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟಗಳು ನಡೆಯುತ್ತವೆ. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದಂತಹ ಸರ್ಕಾರಿ ಕಾರ್ಯಕ್ರಮಗಳಿಗೂ ಮೈದಾನ ಬಳಕೆಯಾಗುತ್ತಿದೆ. ಹೀಗಾಗಿ ಕಾಮಗಾರಿ ಸ್ಥಗಿತಗೊಳಿಸಿ, ಕ್ರೀಡಾ ಸಂಘಟನೆಗಳು, ತರಬೇತುದಾರರು, ಕ್ರೀಡಾಪಟುಗಳು ಹಾಗೂ ತಜ್ಞರೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಟರ್ಫ್ ನಿರ್ಮಾಣವಾದರೆ ಶಾಟ್ಪುಟ್, ಡಿಸ್ಕಸ್ ಥ್ರೋ, ಜಾವೆಲಿನ್ ಥ್ರೋ, ಹ್ಯಾಮರ್ ಥ್ರೋ ಸೇರಿದಂತೆ ಅಥ್ಲೆಟಿಕ್ಸ್ನ ವಿವಿಧ ಎಸೆತ ವಿಭಾಗಗಳ ತರಬೇತಿ ಹಾಗೂ ಸ್ಪರ್ಧೆಗಳಿಗೆ ಸ್ಥಳಾವಕಾಶದ ಸಮಸ್ಯೆ ಎದುರಾಗಲಿದೆ. ಗ್ರಾಮೀಣ ಭಾಗದ ಕ್ರೀಡಾಪಟುಗಳು ಶಾಲಾ-ಕಾಲೇಜುಗಳ ಮೈದಾನಗಳನ್ನು ಅವಲಂಬಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ಫುಟ್ಬಾಲ್ ಮೈದಾನ ನಿರ್ಮಾಣ ಅನಿವಾರ್ಯವಾಗಿದ್ದರೆ, ಸಿಂಥೆಟಿಕ್ ಟರ್ಫ್ ಬದಲಿಗೆ ನೈಸರ್ಗಿಕ ಹುಲ್ಲಿನ ಗ್ರಾಸ್ ಮೈದಾನ ನಿರ್ಮಿಸುವ ಸಾಧ್ಯತೆಯನ್ನು ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದರು.
ಫುಟ್ಬಾಲ್ಗೆ ಅಗತ್ಯ ಸೌಲಭ್ಯ ಕಲ್ಪಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಎಲ್ಲ ಕ್ರೀಡೆಗಳ ತರಬೇತಿ ಹಾಗೂ ಸ್ಪರ್ಧೆಗಳಿಗೆ ಬಳಕೆಯಾಗುತ್ತಿರುವ ಬಹುಉದ್ದೇಶದ ಜಿಲ್ಲಾ ಕ್ರೀಡಾಂಗಣವನ್ನು ಒಂದೇ ಕ್ರೀಡೆಗೆ ಸೀಮಿತಗೊಳಿಸುವುದು ಸರಿಯಲ್ಲ. ಟರ್ಫ್ನಿಂದ ಇತರ ಕ್ರೀಡೆಗಳಿಗೆ ಆಗುವ ತೊಂದರೆಯನ್ನು ಪರಿಗಣಿಸಿ, ಕಾಮಗಾರಿ ಸ್ಥಗಿತಗೊಳಿಸಿ ಸಮಗ್ರ ಯೋಜನೆ ರೂಪಿಸಬೇಕು.
— ರಾಜೂ ಖಾನಪ್ಪನವರ
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟರ್ಫ್ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಬೇಕು. ಕ್ರೀಡಾ ಸಂಘಟನೆಗಳು ಹಾಗೂ ಕ್ರೀಡಾಪಟುಗಳ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿ, ಎಲ್ಲ ಕ್ರೀಡೆಗಳಿಗೂ ತೊಂದರೆಯಾಗದಂತೆ ಸಮಗ್ರ ಕ್ರೀಡಾಂಗಣ ಯೋಜನೆ ರೂಪಿಸಬೇಕು.
— ಅರವಿಂದ ಹುಲ್ಲೂರ



