ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕ್ರೀಡೆಯಲ್ಲಿ ಪಾಲ್ಗೊಳ್ಳದ ಮಕ್ಕಳು ಕೀಟ ಹತ್ತಿದ ಕಾಳಿನಂತೆ ತಮ್ಮ ದೇಹದ ಸಂಪತ್ತನ್ನು ಕಳೆದುಕೊಳ್ಳುತ್ತಾರೆ. ಗುರಿ ಇಲ್ಲದ ಮಕ್ಕಳು ಗರಿ ಇಲ್ಲದ ಹಕ್ಕಿಯಂತೆ ಎತ್ತರಕ್ಕೆ ಹಾರಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಕ್ರೀಡೆ ಹಾಗೂ ಜೀವನದಲ್ಲಿ ಸಾಧಿಸುವ ಗುರಿ ಹೊಂದಿದ್ದರೆ ಯಶಸ್ಸು ಸಾಧ್ಯ ಎಂದು ಶಿರಹಟ್ಟಿ ಶ್ರೀ ಫಕೀರೇಶ್ವರ ಸಂಸ್ಥಾನಮಠದ ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರು ಹೇಳಿದರು.
ಬಾಲೇಹೊಸೂರಿನಲ್ಲಿ ಮಂಗಳವಾರ ನಡೆದ ಸೂರಣಗಿ ಗ್ರುಪ್ ಮಟ್ಟದ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಸದೃಢ ದೇಹದಲ್ಲಿ ದೃಢ ಮನಸ್ಸು ನೆಲೆಗೊಳ್ಳಲು ಕ್ರೀಡೆ ಅಗತ್ಯ. ಕ್ರೀಡೆಯಿಂದ ದೈಹಿಕ ಆರೋಗ್ಯದ ಜತೆಗೆ ಆತ್ಮವಿಶ್ವಾಸ, ಶಿಸ್ತು, ಸಮಯಪ್ರಜ್ಞೆ ಹಾಗೂ ನಾಯಕತ್ವ ಗುಣಗಳು ಬೆಳೆಸಿಕೊಳ್ಳಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮೊಬೈಲ್ ಹಾಗೂ ಟಿವಿಯಂತಹ ಸಾಧನಗಳಿಗೆ ಹೆಚ್ಚಿನ ಸಮಯ ಮೀಸಲಿಡುವ ಬದಲು ದೈಹಿಕ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಕ್ರೀಡೆಯಲ್ಲಿ ಸೋಲು–ಗೆಲುವು ಸಹಜ. ಸೋಲಿನಿಂದ ನಿರಾಶರಾಗದೆ ಅದರಿಂದ ಪಾಠ ಕಲಿತು ಮುಂದಿನ ಸಾಧನೆಗೆ ಪರಿಶ್ರಮಿಸಬೇಕು. ಕ್ರೀಡಾಕೂಟಗಳು ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸುವುದರ ಜತೆಗೆ ಕ್ರೀಡಾಸ್ಫೂರ್ತಿ ಹಾಗೂ ತಂಡದ ಮನೋಭಾವ ಬೆಳೆಸಲು ಸಹಕಾರಿಯಾಗುತ್ತವೆ ಎಂದರು.
ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎನ್. ಭರಮಗೌಡ್ರ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಅನಾವರಣಗೊಳ್ಳಲು ಇಂತಹ ಕ್ರೀಡಾಕೂಟಗಳು ಉತ್ತಮ ವೇದಿಕೆಯಾಗಿವೆ. ವಿದ್ಯಾರ್ಥಿಗಳು ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವ ಗುರಿ ಹೊಂದಬೇಕು ಎಂದು ಕರೆ ನೀಡಿದರು.
ಗ್ರಾಮದ ಹಿರಿಯರಾದ ಗೋಪಾಲರಾವ್ ಕುಬೇರ, ಶಿವಪ್ಪ ಅಂಗೂರ, ಡಿ.ಸಿ. ಬಡೇಖಾನ್, ರಾಮಪ್ಪ ಹಾವನೂರ, ಫಕೀರೇಶ ಮ್ಯಾಟೆಣ್ಣವರ, ನಾಗಯ್ಯ ಮಠಪತಿ, ಜುಂಜಪ್ಪ ಮುದಿಯಮ್ಮನವರ, ಫಕೀರಯ್ಯ ಹಿರೇಮಠ, ದೇವೇಂದ್ರಪ್ಪ ಮತ್ತೂರ, ಬಸವರಾಜ ನೀಲಣ್ಣನವರ, ಗುರುಪಾದಪ್ಪ ಜಾಲವಾಡಗಿ ಉಪಸ್ಥಿತರಿದ್ದರು.
ಸಿಆರ್ಪಿ ಲೋಕೇಶ ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದಲಿಂಗಯ್ಯ ಗಾರವಾಡಮಠ ಸ್ವಾಗತಿಸಿದರು. ರೇಣುಕಸ್ವಾಮಿ ವೆಂಕಟಾಪುರಮಠ ವಂದಿಸಿದರು.
ಕ್ರೀಡಾಕೂಟದಲ್ಲಿ ಸೂರಣಗಿ ಗ್ರುಪ್ ವ್ಯಾಪ್ತಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ವಿವಿಧ ವೈಯಕ್ತಿಕ ಹಾಗೂ ಸಾಮೂಹಿಕ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಎಂ.ಎಸ್. ಚಾಲಕಬ್ಬಿ, ಎಚ್.ಎಂ. ಸಪ್ಪಿನ, ಪರಶುರಾಮ ಕೊರವರ, ಈರನಗೌಡ ಪಾಟೀಲ ಹಾಗೂ ರಮೇಶ ಮುದಗಲ್ ಮಾರ್ಗದರ್ಶನ ನೀಡಿದರು. ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.
ಕ್ರೀಡೆ ವಿದ್ಯಾರ್ಥಿಗಳ ದೇಹವನ್ನು ಸದೃಢಗೊಳಿಸುವುದರ ಜತೆಗೆ ಆತ್ಮವಿಶ್ವಾಸ, ಶಿಸ್ತು ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತದೆ. ಕ್ರೀಡೆಯಲ್ಲಿ ಗುರಿ ಇಟ್ಟುಕೊಂಡು ಪರಿಶ್ರಮಿಸಿದರೆ ಯಶಸ್ಸು ಖಚಿತ.
— ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರು



