HomeGadag Newsಗಣೇಶೋತ್ಸವಕ್ಕೆ ಏಕ ಗವಾಕ್ಷಿ ವ್ಯವಸ್ಥೆ; 24 ಗಂಟೆಯಲ್ಲೇ ಪರವಾನಗಿ!

ಗಣೇಶೋತ್ಸವಕ್ಕೆ ಏಕ ಗವಾಕ್ಷಿ ವ್ಯವಸ್ಥೆ; 24 ಗಂಟೆಯಲ್ಲೇ ಪರವಾನಗಿ!

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಾದ್ಯಂತ ಗೌರಿ-ಗಣೇಶ ಹಬ್ಬವನ್ನು ಶಾಂತಿಯುತವಾಗಿ, ಸುವ್ಯವಸ್ಥಿತವಾಗಿ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸುವ ಉದ್ದೇಶದಿಂದ ಪ್ರತಿ ತಾಲೂಕಿನ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಏಕ ಗವಾಕ್ಷಿ ಸಮಿತಿಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದ್ದಾರೆ.

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪನೆ ಹಾಗೂ ಮೆರವಣಿಗೆ ಮೂಲಕ ವಿಸರ್ಜನೆ ನಡೆಯಲಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯೊಂದಿಗೆ ಅಗ್ನಿಶಾಮಕ, ಲೋಕೋಪಯೋಗಿ, ವಿದ್ಯುತ್, ನಗರಾಭಿವೃದ್ಧಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ನಗರ/ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಹಾಗೂ ಕಂದಾಯ ಇಲಾಖೆಗಳನ್ನು ಒಳಗೊಂಡ ಏಕ ಗವಾಕ್ಷಿ ಸಮಿತಿ ರಚಿಸಲಾಗಿದೆ.

ಸಂಬಂಧಪಟ್ಟ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಸಮಿತಿಯ ಅಧ್ಯಕ್ಷರಾಗಿದ್ದು, ತಾಲೂಕಿನ ತಹಶೀಲ್ದಾರರು ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಗಣೇಶೋತ್ಸವಕ್ಕೆ ಸಂಬಂಧಿಸಿದ ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಿವೆ.

ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಸಲ್ಲಿಸುವ ಅರ್ಜಿಗಳ ಕುರಿತು ಸಂಬಂಧಪಟ್ಟ ಇಲಾಖೆಗಳು ತಮ್ಮ ಅಭಿಪ್ರಾಯ ನೀಡಲಿದ್ದು, ಅರ್ಜಿ ಸ್ವೀಕರಿಸಿದ 24 ಗಂಟೆಗಳೊಳಗಾಗಿ ಅರ್ಜಿದಾರರಿಗೆ ಪರವಾನಗಿ ನೀಡುವಂತೆ ಕ್ರಮ ಕೈಗೊಳ್ಳಲಾಗುವುದು.

ಸಮಿತಿಯ ಸದಸ್ಯ ಇಲಾಖೆಗಳು ಪರಸ್ಪರ ನಿರಂತರ ಸಂಪರ್ಕದಲ್ಲಿದ್ದು, ಹಬ್ಬದ ಸಂದರ್ಭದಲ್ಲಿ ತಮ್ಮ ಕೇಂದ್ರ ಸ್ಥಾನಗಳಲ್ಲಿ ಹಾಜರಿದ್ದು ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಬೇಕು. ಪರವಾನಗಿ ನೀಡುವ ಮುನ್ನ ಆಯೋಜಕರಿಂದ ನ್ಯಾಯಾಲಯದ ನಿರ್ದೇಶನಗಳು ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಸೂಚನೆಗಳನ್ನು ಪಾಲಿಸುವ ಕುರಿತು ಮುಚ್ಚಳಿಕೆ ಪಡೆಯಬೇಕು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಬಗ್ಗೆಯೂ ಆಯೋಜಕರಿಂದ ಖಾತರಿ ಪಡೆಯಬೇಕು.

ಸಾರ್ವಜನಿಕ ಸುರಕ್ಷತೆ ಹಾಗೂ ಪರಿಸರ ಮಾಲಿನ್ಯ ಉಂಟಾಗದ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸುವಂತೆ ಸೂಚಿಸಲಾಗುವುದು. ಅಗತ್ಯವಿರುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು.

ಹೈ-ಟೆನ್ಶನ್ ವಿದ್ಯುತ್ ತಂತಿಗಳು ಹಾದುಹೋಗಿರುವ ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಅನುಮತಿ ನೀಡಬಾರದು. ಸಾರ್ವಜನಿಕ ಸ್ಥಳಗಳಲ್ಲಿ ವಿಗ್ರಹ ಪ್ರತಿಷ್ಠಾಪಿಸುವ ಸಂಘ-ಸಂಸ್ಥೆಗಳು ಸ್ಥಳೀಯ ಸಂಸ್ಥೆ ಹಾಗೂ ಪೊಲೀಸ್ ಇಲಾಖೆಯಿಂದ ಅಗತ್ಯ ಅನುಮತಿ ಪಡೆದ ನಂತರವೇ ಪ್ರತಿಷ್ಠಾಪಿಸಬೇಕು.

ಗಣೇಶೋತ್ಸವಕ್ಕೂ ಮುನ್ನ ನಾಗರಿಕ ಸಮಿತಿ, ಮೊಹಲ್ಲಾ ಸಮಿತಿ, ಕಾವಲು ಸಮಿತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರನ್ನು ಒಳಗೊಂಡ ಕೋಮು ಸೌಹಾರ್ದ ಸಭೆಗಳನ್ನು ಆಯೋಜಿಸಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಸಾರ್ವಜನಿಕರು, ಸಂಘ-ಸಂಸ್ಥೆಗಳು ಹಾಗೂ ಗಣೇಶೋತ್ಸವ ಆಯೋಜಕರು ಆಡಳಿತ ಮತ್ತು ಪೊಲೀಸ್ ಇಲಾಖೆ ನೀಡುವ ಎಲ್ಲ ಮಾರ್ಗಸೂಚಿ ಹಾಗೂ ಮಾನ್ಯ ಉಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಿ ಶಾಂತಿಯುತವಾಗಿ ಹಬ್ಬ ಆಚರಿಸಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img