ಬೆಂಗಳೂರು: ವನ್ಯಜೀವಿ ಪ್ರಿಯರು ಹಾಗೂ ಪ್ರವಾಸಿಗರಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಸಂತಸದ ಸುದ್ದಿ ಸಿಕ್ಕಿದೆ.
ದಕ್ಷಿಣ ಆಫ್ರಿಕಾದಿಂದ ಇತ್ತೀಚೆಗೆ ಕರೆತರಲಾಗಿದ್ದ ನಾಲ್ಕು ಚೀತಾಗಳು ಯಶಸ್ವಿಯಾಗಿ ಬೆಂಗಳೂರಿನ ವಾತಾವರಣಕ್ಕೆ ಹೊಂದಿಕೊಂಡಿದ್ದು, ಇಂದಿನಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.
ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಎರಡು ಗಂಡು ಹಾಗೂ ಎರಡು ಹೆಣ್ಣು ಚೀತಾಗಳು ಕಡ್ಡಾಯ ಕ್ವಾರಂಟೈನ್ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಈ ಅವಧಿಯಲ್ಲಿ ಪಶುವೈದ್ಯರು ಹಾಗೂ ಪ್ರಾಣಿ ಪಾಲನಾ ಸಿಬ್ಬಂದಿ ಅವುಗಳ ಆರೋಗ್ಯ, ಆಹಾರ ಪದ್ಧತಿ ಮತ್ತು ಹವಾಮಾನಕ್ಕೆ ಹೊಂದಿಕೊಳ್ಳುವಿಕೆಯನ್ನು ನಿಕಟವಾಗಿ ಪರಿಶೀಲಿಸಿದ್ದರು. ಎಲ್ಲಾ ಪರೀಕ್ಷೆಗಳು ತೃಪ್ತಿಕರವಾಗಿದ್ದ ಹಿನ್ನೆಲೆಯಲ್ಲಿ ಚೀತಾಗಳನ್ನು ಇದೀಗ ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗಿದೆ.
ಇದೇ ವೇಳೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜೀಬ್ರಾ ಹಾಗೂ ನೀರಾನೆ ಮರಿಗಳ ಜನನವು ಮತ್ತಷ್ಟು ಸಂತಸ ತಂದಿದೆ. ‘ಕಬಿನಿ’ ಹೆಸರಿನ ಜೀಬ್ರಾ ಆರೋಗ್ಯವಂತ ಹೆಣ್ಣು ಮರಿಗೆ ಜನ್ಮ ನೀಡಿದ್ದು, ಇದರೊಂದಿಗೆ ಉದ್ಯಾನದಲ್ಲಿನ ಜೀಬ್ರಾಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಮತ್ತೊಂದೆಡೆ ‘ದಶ್ಯಾ’ ಹೆಸರಿನ ಹೆಣ್ಣು ನೀರಾನೆ ಕೂಡ ಮರಿಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದ್ದು, ನೈಸರ್ಗಿಕ ಬಾಂಧವ್ಯಕ್ಕೆ ಯಾವುದೇ ಅಡಚಣೆಯಾಗದಂತೆ ಸಿಬ್ಬಂದಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.
ಉದ್ಯಾನವನದ ಅಧಿಕಾರಿಗಳ ಪ್ರಕಾರ, ಈ ಬೆಳವಣಿಗೆಗಳು ವನ್ಯಜೀವಿ ಸಂರಕ್ಷಣೆ, ವೈಜ್ಞಾನಿಕ ನಿರ್ವಹಣೆ ಹಾಗೂ ಪ್ರಾಣಿ ಕಲ್ಯಾಣಕ್ಕೆ ನೀಡುತ್ತಿರುವ ಆದ್ಯತೆಯ ಪ್ರತೀಕವಾಗಿವೆ. ವನ್ಯಜೀವಿಗಳು ಆರೋಗ್ಯಕರವಾಗಿ ಬೆಳೆಯಲು ಅಗತ್ಯವಾದ ನೈಸರ್ಗಿಕ ವಾತಾವರಣವನ್ನು ಉದ್ಯಾನವನದಲ್ಲಿ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.



