ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಮಹಾದೇವಪುರ ಗ್ರಾಮದ ಬಳಿ ಪಾಳು ಬಾವಿಯಲ್ಲಿ ನವವಿವಾಹಿತೆಯ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ನಾಯಕನಹಟ್ಟಿ ಮತ್ತು ತಳಕು ಪೊಲೀಸರು ನಡೆಸಿದ ತನಿಖೆಯಲ್ಲಿ ಪ್ರಕರಣದ ಸತ್ಯ ಹೊರಬಿದ್ದಿದೆ.
ಆಗಸ್ಟ್ 13ರಂದು ಚಳ್ಳಕೆರೆ ತಾಲೂಕಿನ ಚಿಕ್ಕ ಉಳ್ಳಾರ್ತಿ ಗ್ರಾಮದ ನಿವಾಸಿ ಸುಮಲತಾ ಮನೆಯಿಂದ ನಾಪತ್ತೆಯಾಗಿದ್ದರು. ಸುಮಲತಾ ಅವರು ಗಜೇಂದ್ರ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು. ಕುಟುಂಬಸ್ಥರ ವಿರೋಧ ಅಥವಾ ಗಮನಕ್ಕೆ ಬಾರದಂತೆ ಇರಲು ನವದಂಪತಿ ಜಮೀನೊಂದರಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ಈ ವಿಚಾರ ತಿಳಿದಿದ್ದ ಗಜೇಂದ್ರನ ಸ್ನೇಹಿತ ಬೋರಯ್ಯ ಜಮೀನಿಗೆ ತೆರಳಿದ್ದ. ಈ ವೇಳೆ ಸುಮಲತಾ ಒಬ್ಬರೇ ಇದ್ದು ಬಟ್ಟೆ ಬದಲಿಸುತ್ತಿದ್ದರು ಎನ್ನಲಾಗಿದೆ. ಆಗ ಬೋರಯ್ಯ ಅವರ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಸಾಕ್ಷ್ಯ ಸಿಗದಂತೆ ಮಾಡಲು ಸುಮಲತಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಕೊಲೆ ಮಾಡಿದ ಬಳಿಕ ಬೋರಯ್ಯ ತನ್ನ ಸಹೋದರ ಕಾರಯ್ಯನಿಗೆ ಕರೆ ಮಾಡಿದ್ದಾನೆ. ಇಬ್ಬರೂ ಸೇರಿ ಸುಮಲತಾಳ ಮೃತದೇಹವನ್ನು ಚಳ್ಳಕೆರೆ ತಾಲೂಕಿನ ಮಹಾದೇವಪುರ ಗ್ರಾಮದ ಬಳಿಯ ಪಾಳು ಬಾವಿಗೆ ತೆಗೆದುಕೊಂಡು ಹೋಗಿ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತ ಸುಮಲತಾ ನಾಪತ್ತೆಯಾಗಿದ್ದರಿಂದ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು. ನಂತರ ಮಹಾದೇವಪುರದ ಪಾಳು ಬಾವಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಕುಟುಂಬಸ್ಥರು ಶವವನ್ನು ಸುಮಲತಾಳದ್ದು ಎಂದು ಗುರುತಿಸಿದ್ದರು. ಈ ಸಂಬಂಧ ಗಜೇಂದ್ರನೇ ಸುಮಲತಾಳನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ನಾಯಕನಹಟ್ಟಿ ಪೊಲೀಸರು ತನಿಖೆ ಆರಂಭಿಸಿದರು. ನಾಯಕನಹಟ್ಟಿ ಪಿಎಸ್ಐ ಪಾಂಡುರಂಗಪ್ಪ ಹಾಗೂ ತಳಕು ಸಿಪಿಐ ಹನುಮಂತಪ್ಪ ನೇತೃತ್ವದ ಪೊಲೀಸ್ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿತು. ತನಿಖೆಯ ವೇಳೆ ಗಜೇಂದ್ರನ ಸ್ನೇಹಿತ ಬೋರಯ್ಯ ಹಾಗೂ ಆತನ ಸಹೋದರ ಕಾರಯ್ಯನ ಪಾತ್ರದ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದೆ.
ನಂತರ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣದ ವಿವರಗಳು ಹೊರಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಲತಾಳ ಮೇಲೆ ಅತ್ಯಾಚಾರವೆಸಗಿ, ಬಳಿಕ ಕೊಲೆ ಮಾಡಿ ಮೃತದೇಹವನ್ನು ಪಾಳು ಬಾವಿಗೆ ಎಸೆದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೋರಯ್ಯ ಮತ್ತು ಕಾರಯ್ಯನನ್ನು ಪೊಲೀಸರು ಬಂಧಿಸಿದ್ದು, ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ಪ್ರಕರಣವನ್ನು ಶೀಘ್ರವಾಗಿ ಭೇದಿಸಿ ಆರೋಪಿಗಳನ್ನು ಬಂಧಿಸಿದ ನಾಯಕನಹಟ್ಟಿ ಮತ್ತು ತಳಕು ಪೊಲೀಸರ ಕಾರ್ಯವನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಶ್ಲಾಘಿಸಿದ್ದಾರೆ.



