ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ರಕ್ಷಾಬಂಧನದ ಪ್ರಯುಕ್ತ ಈ ಬಾರಿ ಸರ್ಕಾರ ಮಹಿಳೆಯರಲ್ಲದೆ ಪುರುಷರಿಗೂ ಸಾರ್ವಜನಿಕ ರಜೆ ಘೋಷಿಸಿದೆ. ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರ ಗುರುವಾರ ಆಗಸ್ಟ್ 28 (ಶುಕ್ರವಾರ) ರಾಜ್ಯಾದ್ಯಂತ ರಜೆ ಘೋಷಿಸಿದೆ. ಮೊದಲು ರಕ್ಷಾಬಂಧನದಂದು ಮಹಿಳೆಯರಿಗೆ ಮಾತ್ರ ರಜೆ ನೀಡಲಾಗುತ್ತಿತ್ತು, ಆದರೆ ಈ ಬಾರಿ ಪುರುಷರಿಗೂ ರಜೆ ಘೋಷಿಸಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ X ನಲ್ಲಿ ಮಾಹಿತಿ ಹಂಚಿಕೊಂಡ ಮುಖ್ಯಮಂತ್ರಿ ಸುಖು, ರಕ್ಷಾಬಂಧನ ಸಹೋದರ-ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ ಮತ್ತು ವಾತ್ಸಲ್ಯವನ್ನು ಆಚರಿಸುವ ಪವಿತ್ರ ಹಬ್ಬ ಎಂದರು. ಬಾಲ್ಯದ ಚೇಷ್ಟೆಯಿಂದ ಹಿಡಿದು ಜೀವನದ ಪ್ರತಿಯೊಂದು ಹಂತದಲ್ಲೂ ಪರಸ್ಪರ ಬೆಂಬಲವಾಗಿ ನಿಲ್ಲುವವರೆಗೆ ಈ ಬಂಧ ವಿಶೇಷ ಎಂದ ಅವರು, ಸಹೋದರ-ಸಹೋದರಿಯರು ರಕ್ಷಾಬಂಧನವನ್ನು ಒಟ್ಟಿಗೆ ಆಚರಿಸಲು ಹಾಗೂ ಕುಟುಂಬಗಳೊಂದಿಗೆ ಸಂತೋಷ ಹಂಚಿಕೊಳ್ಳಲು ಅನುವು ಮಾಡಿಕೊಡಲು ಶುಕ್ರವಾರ ರಾಜ್ಯಾದ್ಯಂತ ಒಂದು ದಿನದ ಸಾರ್ವಜನಿಕ ರಜೆ ಘೋಷಿಸುವುದಾಗಿ ತಿಳಿಸಿದರು.
ಉತ್ತರ ಪ್ರದೇಶದಲ್ಲಿ, ಆಗಸ್ಟ್ 28ರಂದು ರಕ್ಷಾಬಂಧನದ ಸಂದರ್ಭದಲ್ಲಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಬಸ್‌ಗಳಲ್ಲಿ ಆಗಸ್ಟ್ 27ರಂದು ಬೆಳಿಗ್ಗೆ 6 ಗಂಟೆಯಿಂದ ಆಗಸ್ಟ್ 29ರ ಮಧ್ಯರಾತ್ರಿಯವರೆಗೆ ಉಚಿತ ಪ್ರಯಾಣ ಲಭ್ಯವಿರಲಿದೆ. ಈ ವರ್ಷ ರಕ್ಷಾಬಂಧನವನ್ನು ಆಗಸ್ಟ್ 28 (ಶುಕ್ರವಾರ) ರಂದು ಆಚರಿಸಲಾಗುತ್ತಿದ್ದು, ಉತ್ತರ ಪ್ರದೇಶ, ಬಿಹಾರ, ಪಂಜಾಬ್, ಹರಿಯಾಣ, ಉತ್ತರಾಖಂಡ ಮತ್ತು ಗುಜರಾತ್‌ನಂತಹ ಹಲವಾರು ರಾಜ್ಯಗಳು ಶಾಲಾ ರಜೆ ಘೋಷಿಸಿವೆ.



