HomeGadag Newsಮನೇರೆಗಾ ಕಾಮಗಾರಿಯಲ್ಲಿ₹37.63 ಲಕ್ಷ ಆಕ್ಷೇಪಣೆ!

ಮನೇರೆಗಾ ಕಾಮಗಾರಿಯಲ್ಲಿ₹37.63 ಲಕ್ಷ ಆಕ್ಷೇಪಣೆ!

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಕಳೆದ ೨೦೨೫-೨೬ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ವಿವಿಧ ಕಾಮಗಾರಿಗಳಲ್ಲಿ ದಾಖಲೆಗಳ ಹೊಂದಾಣಿಕೆ ಇಲ್ಲದಿರುವುದು ಸೇರಿದಂತೆ ಹಲವು ಕಾರಣಗಳಿಂದ ₹೩೭.೬೩ ಲಕ್ಷ ಮೊತ್ತವನ್ನು ಆಕ್ಷೇಪಣೆಗೆ ಒಳಪಡಿಸಲಾಗಿದೆ ಎಂದು ಮನರೇಗಾ ತಾಲೂಕು ಸಂಪನ್ಮೂಲ ವ್ಯಕ್ತಿ ಸಂತೋಷ ಪಾಟೀಲ ತಿಳಿಸಿದರು.

ಲಕ್ಕುಂಡಿ ಗ್ರಾಮ ಪಂಚಾಯಿತಿ ವತಿಯಿಂದ ಇಲ್ಲಿನ ದುರ್ಗಾದೇವಿ ಸಮುದಾಯ ಭವನದಲ್ಲಿ ನಡೆದ ೨೦೨೫-೨೬ನೇ ಸಾಲಿನ ಮನರೇಗಾ ಯೋಜನೆ ಹಾಗೂ ೧೫ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆ ಗ್ರಾಮಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.

ದನದ ದೊಡ್ಡಿ, ಮನೆ ನಿರ್ಮಾಣ, ಬದು ನಿರ್ಮಾಣ, ಅರಣ್ಯೀಕರಣ, ಸಿ.ಸಿ. ರಸ್ತೆ, ಗಟಾರು ನಿರ್ಮಾಣ, ಶಾಲಾ ಆಟದ ಮೈದಾನ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ₹೧,೦೯,೪೧,೨೪೯ ಕೂಲಿ ಮೊತ್ತ ಹಾಗೂ ₹೧೩,೭೭,೩೨೨ ಸಾಮಗ್ರಿ ಮೊತ್ತ ಸೇರಿ ಒಟ್ಟು ₹೧,೨೩,೧೮,೫೭೧ ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.

ಕಾಮಗಾರಿಗಳ ಅಳತೆ ಪುಸ್ತಕಗಳಿಗೆ ಚೆಕ್ ಮೆಷರ್‌ಮೆಂಟ್ ಇಲ್ಲದಿರುವುದು, ಬಿಲ್‌ಗಳಲ್ಲಿ ಪೂರೈಕೆದಾರರ ಸಹಿ ಇಲ್ಲದಿರುವುದು, ಕೆಟಿಟಿಪಿ ನಿಯಮಗಳನ್ನು ಪಾಲಿಸದಿರುವುದು ಹಾಗೂ ಅರಣ್ಯ ಇಲಾಖೆ ಕಾಮಗಾರಿಗಳಿಗೆ ನೀರು ಹಾಕಿರುವ ಕುರಿತು ಛಾಯಾಚಿತ್ರಗಳಿಲ್ಲದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ₹೩೭,೬೩,೮೪೧ ಮೊತ್ತವನ್ನು ಆಕ್ಷೇಪಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು.

೧೫ನೇ ಹಣಕಾಸು ಯೋಜನೆಯಡಿ ಕುಡಿಯುವ ನೀರು, ಬೀದಿ ದೀಪ, ಶಾಲಾ ಮೈದಾನ, ಗಟಾರು, ಹೈಮಾಸ್ಟ್, ಸ್ವಚ್ಛತೆ ಸೇರಿದಂತೆ ೧೧ ಕಾಮಗಾರಿಗಳಿಗೆ ₹೫೦,೨೩,೦೯೮ ವೆಚ್ಚ ಮಾಡಲಾಗಿದೆ. ಈ ಪೈಕಿ ₹೫೯,೬೭೪ ತೆರಿಗೆ ಭರಣ ಮಾಡಿಲ್ಲ ಎಂದು ಸಭೆಗೆ ತಿಳಿಸಲಾಯಿತು.

ಗ್ರಾಮಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕುಬೇರಪ್ಪ ಬೆಂತೂರು, ಕಳೆದ ಎರಡು-ಮೂರು ವರ್ಷಗಳಿಂದ ಸಾಮಾಜಿಕ ಪರಿಶೋಧನೆಯಲ್ಲಿ ವಿವಿಧ ಕಾಮಗಾರಿಗಳ ಲಕ್ಷಾಂತರ ರೂಪಾಯಿ ಮೊತ್ತವನ್ನು ಆಕ್ಷೇಪಣೆಗೆ ಒಳಪಡಿಸಲಾಗುತ್ತಿದೆ. ಆದರೆ ಆಕ್ಷೇಪಣೆಗೆ ಒಳಪಟ್ಟ ಹಣದ ವಸೂಲಾತಿ ಆಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಅಧಿಕಾರಿಗಳು ಗ್ರಾಮಸಭೆಗೆ ಮಾಹಿತಿ ನೀಡುವುದಿಲ್ಲ. ಇದರಿಂದ ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ದೊರೆಯದೆ ಚರ್ಚೆ ಮುಗಿದುಹೋಗುತ್ತದೆ ಎಂದು ದೂರಿದರು.

ಲಕ್ಷ ರೂಪಾಯಿ ಮೀರಿದ ಕಾಮಗಾರಿಗಳನ್ನು ಟೆಂಡರ್ ಕರೆಯದೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಪ್ರಸ್ತುತ ನಡೆಯುತ್ತಿರುವ ವಿಬಿಜಿ ರಾಮ್‌ಜಿ ಕಾಮಗಾರಿಗಳಲ್ಲಿ ವಿಕಲಚೇತನರನ್ನು ಕೂಲಿ ಕೆಲಸಕ್ಕೆ ತೆಗೆದುಕೊಳ್ಳದಿರುವ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು.

ಎಂಕೆಬಿಎಸ್ ಶಾಲೆಯಲ್ಲಿ ಶೌಚಾಲಯ ನಿರ್ಮಾಣ, ಶಾಲಾ ಮೈದಾನದಲ್ಲಿರುವ ತೆರೆದ ಬಾವಿಗೆ ಮುಚ್ಚಳ ಅಳವಡಿಕೆ ಸೇರಿದಂತೆ ಇತರ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಾಕಷ್ಟು ಬಾರಿ ತಿಳಿಸಿದರೂ ಕಾಳಜಿ ವಹಿಸಿಲ್ಲ ಎಂದು ಗ್ರಾಮಸ್ಥರು ದೂರಿದರು.

ಕಳೆದ ವರ್ಷದ ಉದ್ಯೋಗ ಖಾತ್ರಿ ಯೋಜನೆಯ ಆಕ್ಷೇಪಣೆ ಹಣದ ವಸೂಲಾತಿ ಕುರಿತು ಗ್ರಾಮಸಭೆಯಲ್ಲಿ ಚರ್ಚೆಯಾಗದಿರುವ ಬಗ್ಗೆ ನಾಗಮ್ಮ ಹಾಲಿನವರ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಪಿಡಿಒ ಉತ್ತರಿಸಿದರು.

ಪ್ರಸ್ತುತ ಆರಂಭವಾಗಿರುವ ಕಾಮಗಾರಿ ಸ್ಥಳಗಳು ದೂರದಲ್ಲಿದ್ದು, ಕೆಲಸದ ಸ್ಥಳಕ್ಕೆ ತೆರಳಲು ಹೆಚ್ಚಿನ ಸಮಯ ಬೇಕಾಗುತ್ತಿದೆ. ಆದ್ದರಿಂದ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಕೂಲಿ ಕಾರ್ಮಿಕರು ಗ್ರಾಮಸಭೆಯಲ್ಲಿ ಒತ್ತಾಯಿಸಿದರು.

ಸತತವಾಗಿ ೧೨೫ ದಿನಗಳ ಕೆಲಸ ನೀಡಬೇಕು, ಕೆಲಸದ ಸ್ಥಳಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ಕೂಲಿ ಮೊತ್ತವನ್ನು ಶೀಘ್ರ ಪಾವತಿಸಬೇಕು ಹಾಗೂ ಆರೋಗ್ಯ ಕಿಟ್ ವಿತರಿಸಬೇಕು ಎಂದು ಕಾರ್ಮಿಕರು ಆಗ್ರಹಿಸಿದರು.

ಇದಕ್ಕೆ ಸ್ಪಂದಿಸಿದ ಪಿಡಿಒ ಅಮೀರನಾಯಕ, ಸಾರಿಗೆ ವ್ಯವಸ್ಥೆ ಕಲ್ಪಿಸುವ ಕುರಿತು ಯಾವುದೇ ಆದೇಶ ಬಂದಿಲ್ಲ. ಆದರೆ ಕೆಲಸದ ಸ್ಥಳಗಳಿಗೆ ೨೦ ಕ್ಯಾನ್ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಲಕ್ಕುಂಡಿಯಲ್ಲಿ ವಿಬಿಜಿ ರಾಮ್‌ಜಿ ಕಾಮಗಾರಿ ಆರಂಭಿಸಲಾಗಿದ್ದು, ಕಾರ್ಮಿಕರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ನೋಡಲ್ ಅಧಿಕಾರಿಯಾಗಿ ಆಗಮಿಸಿದ್ದ ಗ್ರಾಮೀಣ ಕ್ಷೇತ್ರ ಸಮನ್ವಯಾಧಿಕಾರಿ ಜೆ.ಎ. ಭಾವಿಕಟ್ಟಿ ಮಾತನಾಡಿದರು. ಆಡಳಿತಾಧಿಕಾರಿ ಶಿವಕುಮಾರ ವಾಲಿ, ತಾಂತ್ರಿಕ ಸಹಾಯಕ ವಿಜಯ ಅಬ್ಬಿಗೇರಿ, ಸಾಮಾಜಿಕ ಪರಿಶೋಧನೆ ತಂಡದ ವಸಂತ ಹಾದಿಮನಿ, ಮಲ್ಲಪ್ಪ ಜಿನಗಿ, ಮೈಲಾರಪ್ಪ ಹುಯಿಲಗೋಳ, ಮಂಜುನಾಥ ಹುಡೇದ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಸಾಮಾಜಿಕ ಪರಿಶೋಧನೆಯಲ್ಲಿ ಲಕ್ಷಾಂತರ ರೂಪಾಯಿ ಮೊತ್ತವನ್ನು ಆಕ್ಷೇಪಣೆಗೆ ಒಳಪಡಿಸಲಾಗುತ್ತಿದೆ. ಆದರೆ ಆ ಹಣದ ವಸೂಲಾತಿ ಏನಾಯಿತು ಎಂಬ ಮಾಹಿತಿ ಗ್ರಾಮಸಭೆಗೆ ನೀಡಬೇಕು.

— ಕುಬೇರಪ್ಪ ಬೆಂತೂರು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img