ಬೆಂಗಳೂರು: ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕ ಆಡುಗೋಡಿಯಲ್ಲಿ ಒಂದೂವರೆ ವರ್ಷದ ಮಗು 4ನೇ ಮಹಡಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಆಗಸ್ಟ್ 15ರಂದು ಬೆಳಗ್ಗೆ 10.50ರ ಸುಮಾರಿಗೆ ಈ ಅವಘಡ ಸಂಭವಿಸಿದೆ.
ತಂದೆ-ತಾಯಿ ಮಗುವನ್ನು ಮನೆಯ ಮುಂದೆ ಆಟವಾಡಲು ಬಿಟ್ಟಿದ್ದ ವೇಳೆ, ಮಗು ಗ್ರಿಲ್ ಮೇಲೆ ಹತ್ತಿದೆ. ಈ ವೇಳೆ ಆಯತಪ್ಪಿ 4ನೇ ಮಹಡಿಯಿಂದ ಕೆಳಗೆ ಬಿದ್ದಿದೆ. ಕೆಳಗೆ ಬೀಳುವ ವೇಳೆ ಮಗು ಬೌನ್ಸ್ ಆಗಿ ಮತ್ತೆ ನೆಲಕ್ಕೆ ಅಪ್ಪಳಿಸಿದ್ದರಿಂದ ಗಂಭೀರ ಗಾಯಗಳಾಗಿವೆ.
ಘಟನೆಯನ್ನು ಕಣ್ಣಾರೆ ಕಂಡ ಸ್ಥಳೀಯರು ತಕ್ಷಣ ಮಗುವಿನ ರಕ್ಷಣೆಗೆ ಧಾವಿಸಿ, ಬೈಕ್‌ನಲ್ಲಿ ಕೋರಮಂಗಲದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಸದ್ಯ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.
ಮಗು 4ನೇ ಮಹಡಿಯಿಂದ ಕೆಳಗೆ ಬೀಳುವ ಭಯಾನಕ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಕರಣ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.



