Home Blog Page 96

ಮನೆಗೆ ನುಗ್ಗಿ ಯುವತಿಗೆ ಚಾಕು ಇರಿತ: ಮೂವರು ಅರೆಸ್ಟ್, ಇಬ್ಬರಿಗೆ ಶೋಧ

ಚಿಕ್ಕಬಳ್ಳಾಪುರ: ಚುಡಾಯಿಸಿದ್ದಕ್ಕೆ ಕೆನ್ನೆಗೆ ಬಾರಿಸಿದ್ದ ಯುವತಿಯ ಮೇಲೆ ಸೇಡು ತೀರಿಸಿಕೊಳ್ಳಲು ಮನೆಗೆ ನುಗ್ಗಿ ಚಾಕು ಇರಿದ ಪ್ರಕರಣದಲ್ಲಿ ಚಿಂತಾಮಣಿ ನಗರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಲಕ್ಷ್ಮೀ, ಮಂಜುನಾಥ ಹಾಗೂ ಜಬಿವುಲ್ಲಾ ಬಂಧಿತರಾಗಿದ್ದು, ಕಾರ್ತಿಕ್ ಮತ್ತು ವಿನೋದ್ ಪರಾರಿಯಾಗಿದ್ದಾರೆ. ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಆಶ್ರಯ ಬಡಾವಣೆಯ ನಿವಾಸಿ ಮೇಘನಾ ಅವರನ್ನು ಆರೋಪಿಗಳು ಚುಡಾಯಿಸಿದ್ದರು. ಇದಕ್ಕೆ ಆಕ್ರೋಶಗೊಂಡ ಯುವತಿ ಅವರ ಕೆನ್ನೆಗೆ ಬಾರಿಸಿದ್ದಳು. ಇದೇ ದ್ವೇಷದಿಂದ ಆರೋಪಿಗಳು ಯುವತಿಯ ಮನೆಗೆ ನುಗ್ಗಿ ಚಾಕುವಿನಿಂದ ಹಲ್ಲೆ ನಡೆಸಿದ್ದರು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದ ಇಬ್ಬರು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ.

ರೇಣುಕಾಸ್ವಾಮಿ ಕೇಸ್‌ನಲ್ಲಿ ದರ್ಶನ್‌ಗೆ ಭಾರಿ ಹಿನ್ನಡೆ: ಸುಪ್ರೀಂ ರಿಜಿಸ್ಟ್ರಿಯಿಂದಲೇ ಅರ್ಜಿ ವಜಾ

ನವದೆಹಲಿ: ನಟ ದರ್ಶನ್ ತೂಗುದೀಪ್ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಮ್ಮೆ ಭಾರೀ ಹಿನ್ನಡೆಯಾಗಿದೆ. ಜಾಮೀನು ಸಂಬಂಧದ ತಿದ್ದುಪಡಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯೇ ತಿರಸ್ಕರಿಸಿದ್ದು, ದರ್ಶನ್‌ಗೆ ಸದ್ಯ ಜೈಲಿನಿಂದ ಹೊರಬರುವ ದಾರಿ ಮತ್ತಷ್ಟು ಕಠಿಣವಾಗಿದೆ.

ಒಂದು ವರ್ಷದೊಳಗೆ ಜಾಮೀನು ಅರ್ಜಿ ಸಲ್ಲಿಸದಂತೆ ಈ ಹಿಂದೆ ನೀಡಿದ್ದ ಆದೇಶದಲ್ಲಿ ತುರ್ತು ಪರಿಸ್ಥಿತಿಗೆ ವಿನಾಯಿತಿ ನೀಡುವಂತೆ ದರ್ಶನ್ ಮನವಿ ಮಾಡಿದ್ದರು. ಆದರೆ, ಈ ಅರ್ಜಿ ವಿಚಾರಣೆಗೆ ಅರ್ಹವಲ್ಲ ಎಂದು ಹೇಳಿ ರಿಜಿಸ್ಟ್ರಿ ನೇರವಾಗಿ ವಜಾಗೊಳಿಸಿದೆ.

ಈ ಹಿಂದೆ ವಿಚಾರಣೆ ನಡೆಸಿದ್ದ ಪರ್ದಿವಾಲಾ-ವಿಜಯ್ ಬಿಷ್ಣೋಯಿ ಪೀಠ, ಜೈಲಿನಲ್ಲಿರುವ ಕ್ವಾರಂಟೈನ್ ಸೆಲ್ ಕೂಡ ಜೈಲಿನ ಭಾಗವೇ ಎಂದು ಸ್ಪಷ್ಟಪಡಿಸಿ, ವಿಶೇಷ ಸೌಲಭ್ಯ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿತ್ತು. ಜೈಲು ಮ್ಯಾನ್ಯುಯಲ್ ಪ್ರಕಾರ ಅಗತ್ಯ ಸೌಲಭ್ಯಗಳನ್ನು ಮಾತ್ರ ನೀಡಲು ಸೂಚಿಸಿ, ಜಾಮೀನು ನಿರಾಕರಿಸಿತ್ತು.

ಈ ಬೆಳವಣಿಗೆಯಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ಮತ್ತೊಂದು ಕಾನೂನು ಹಿನ್ನಡೆಯಾಗಿದ್ದು, ನ್ಯಾಯಾಲಯದ ಹಿಂದಿನ ಆದೇಶದಂತೆ ಮುಂದಿನ ವರ್ಷದ ಮೇ 15ರವರೆಗೆ ಜೈಲಿನಲ್ಲೇ ಉಳಿಯುವ ಪರಿಸ್ಥಿತಿ ಬಹುತೇಕ ಖಚಿತವಾಗಿದೆ.

ಗೃಹ ಜ್ಯೋತಿ ಮನೆ-ಮನೆ ಪರಿಶೀಲನೆಗೆ ಜಾತಿ ಪ್ರಮಾಣಪತ್ರ ಕಡ್ಡಾಯವಲ್ಲ: ಬೆಸ್ಕಾಂ ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ ಜುಲೈ 1ರಿಂದ ಆರಂಭವಾಗಿರುವ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿ ಸಂಗ್ರಹ ಪ್ರಕ್ರಿಯೆಯಲ್ಲಿ ಜಾತಿ ಅಥವಾ ಪ್ರವರ್ಗಕ್ಕೆ ಸಂಬಂಧಿಸಿದ ಮಾಹಿತಿ ನೀಡುವುದು ಕಡ್ಡಾಯವಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ. ಈ ಮಾಹಿತಿ ನೀಡುವುದು ಸಂಪೂರ್ಣವಾಗಿ ಫಲಾನುಭವಿಗಳ ಇಚ್ಛೆಗೆ ಬಿಟ್ಟ ವಿಚಾರವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಗೃಹ ಜ್ಯೋತಿ ಯೋಜನೆಯ ಪುನರ್ ಪರಿಶೀಲನೆ ಅಂಗವಾಗಿ ಬೆಸ್ಕಾಂ ಸಿಬ್ಬಂದಿ ಹಾಗೂ ಮೀಟರ್ ರೀಡರ್‌ಗಳು ಸೇವಾ ಸಿಂಧು ಮೊಬೈಲ್ ಅಪ್ಲಿಕೇಶನ್ ಮತ್ತು ಮುದ್ರಿತ ಘೋಷಣಾ ಪತ್ರದ ಮೂಲಕ ಮನೆ-ಮನೆಗೆ ತೆರಳಿ ಫಲಾನುಭವಿಗಳ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.

ಫಲಾನುಭವಿಯ ಪ್ರವರ್ಗ ಅಥವಾ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಮಾಹಿತಿ ಕೇಳುತ್ತಿರುವ ಕುರಿತು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದ್ದ ಗೊಂದಲಗಳಿಗೆ ಸ್ಪಷ್ಟನೆ ನೀಡಿರುವ ಬೆಸ್ಕಾಂ, ಜಾತಿ ಮಾಹಿತಿ ನೀಡಲು ಫಲಾನುಭವಿಗಳು ಇಚ್ಛಿಸದಿದ್ದರೆ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಇರುವ ‘ಮಾಹಿತಿ ನೀಡಲು ನಿರಾಕರಣೆ’ ಎಂಬ ಆಯ್ಕೆಯನ್ನು ದಾಖಲಿಸುವಂತೆ ಸಿಬ್ಬಂದಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹ ಜ್ಯೋತಿ ಯೋಜನೆ 2023ರ ಜುಲೈನಲ್ಲಿ ಜಾರಿಗೆ ಬಂದಿತ್ತು. ಇದೀಗ ಯೋಜನೆಯ ಫಲಾನುಭವಿಗಳ ಮಾಹಿತಿ ಹಾಗೂ ದಾಖಲೆಗಳ ಮರುಪರಿಶೀಲನೆ ಕಾರ್ಯವನ್ನು ಎಲ್ಲಾ ಎಸ್ಕಾಂಗಳ ಸಿಬ್ಬಂದಿ ಕೈಗೊಂಡಿದ್ದಾರೆ.

ಈ ಪ್ರಕ್ರಿಯೆಯಲ್ಲಿ ಮೀಟರ್ ರೀಡರ್‌ಗಳು ಹಾಗೂ ಎಸ್ಕಾಂ ಸಿಬ್ಬಂದಿ ಗ್ರಾಹಕರ ಮನೆಗಳಿಗೆ ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲಿಸಿ ಮೊಬೈಲ್ ಅಪ್ಲಿಕೇಶನ್ ಹಾಗೂ ಘೋಷಣಾ ಪತ್ರದ ಮೂಲಕ ಮಾಹಿತಿ ದಾಖಲಿಸುತ್ತಿದ್ದಾರೆ.

ಮನೆ-ಮನೆ ಪರಿಶೀಲನೆ ವೇಳೆ ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಅಗತ್ಯವಿದ್ದಲ್ಲಿ ಬಾಡಿಗೆ ಒಪ್ಪಂದ ಪತ್ರ ಸೇರಿದಂತೆ ಕೆಲವು ದಾಖಲೆಗಳನ್ನು ತೋರಿಸುವಂತೆ ಫಲಾನುಭವಿಗಳಿಗೆ ಮನವಿ ಮಾಡಲಾಗಿದೆ. ಜಾತಿ ಪ್ರಮಾಣಪತ್ರದ ಮಾಹಿತಿಯನ್ನು ಕೇಳಲಾಗಿದ್ದರೂ, ಅದನ್ನು ಒದಗಿಸುವುದು ಕಡ್ಡಾಯವಲ್ಲ ಎಂಬುದನ್ನು ಬೆಸ್ಕಾಂ ಪುನರುಚ್ಚರಿಸಿದೆ.

ಮುಸ್ಲಿಂ ಧರ್ಮಗುರುಗಳಿಗೆ ಅವಮಾನ ಆರೋಪ: ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ಅರೆಸ್ಟ್!

ಹಾಸನ: ಮುಸ್ಲಿಂ ಧರ್ಮಗುರುಗಳಿಗೆ ಅವಮಾನಕರ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿಯನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ ಅಬ್ದುಲ್ ರಜಾಕ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕೆರೆಹಳ್ಳಿ ಗ್ರಾಮದಲ್ಲಿರುವ ಪುನೀತ್ ಅವರ ನಿವಾಸಕ್ಕೆ ತೆರಳಿ ಅವರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ.

ಬಂಧನದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಪುನೀತ್ ಕೆರೆಹಳ್ಳಿ, ತಮ್ಮ ವಿರುದ್ಧ ರಾಜಕೀಯ ಪ್ರೇರಿತ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು. ತಮಗೆ ಜೀವ ಬೆದರಿಕೆ ಇದ್ದು, ಈ ಸಂಬಂಧ ತಾವು ಅಬ್ದುಲ್ ರಜಾಕ್ ವಿರುದ್ಧವೂ ದೂರು ನೀಡಿದ್ದೇನೆ. ಆದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ತಮ್ಮನ್ನು ಬಂಧಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಉದ್ದೇಶಪೂರ್ವಕವಾಗಿ ತಮ್ಮ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಅವರು ಆರೋಪಿಸಿದರು.

ಪುನೀತ್ ಕೆರೆಹಳ್ಳಿ ಅವರನ್ನು ಪೊಲೀಸರು ಬಂಧಿಸಿ ಕರೆದೊಯ್ಯುವ ವೇಳೆ ಅವರ ತಾಯಿ ಭಾವುಕರಾಗಿ ಕಣ್ಣೀರಿಟ್ಟರು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದು, ತನಿಖೆ ಮುಂದುವರಿದಿದೆ.

ಪತಿ ಕೊಲೆ ಪ್ರಕರಣ: ಸೋನಂ ರಘುವಂಶಿ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಸುಪ್ರೀಂ!

ನವದೆಹಲಿ: ಹನಿಮೂನ್ ವೇಳೆ ಪತಿ ರಾಜಾ ರಘುವಂಶಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸೋನಂ ರಘುವಂಶಿಗೆ ನೀಡಲಾಗಿದ್ದ ಜಾಮೀನನ್ನು ರದ್ದುಪಡಿಸುವಂತೆ ಮೇಘಾಲಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸುವಂತೆ ಮೇಘಾಲಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಹಾಗೂ ಶೀಲ್ ನಾಗು ಅವರಿದ್ದ ಪೀಠವು ವಿಚಾರಣೆ ನಡೆಸಿತು. ಆರಂಭದಲ್ಲಿ ಸೋನಂಗೆ ನೀಡಿದ್ದ ಜಾಮೀನಿನ ಆದೇಶಕ್ಕೆ ತಡೆ ನೀಡುವ ಬಗ್ಗೆ ನ್ಯಾಯಪೀಠ ಒಲವು ತೋರಿದರೂ, ಆರೋಪಿ ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಯಾಗಿರುವುದು ಹಾಗೂ ಪ್ರಕರಣದ ಸತ್ಯಾಸತ್ಯತೆ ವಿಚಾರಣೆಯ ವೇಳೆ ನಿರ್ಧಾರವಾಗಬೇಕಿರುವುದರಿಂದ ಹೈಕೋರ್ಟ್ ಆದೇಶವನ್ನು ಹಿಂಪಡೆಯಲು ನಿರಾಕರಿಸಿತು. ಆದರೆ, ಜಾಮೀನು ನೀಡಿದ ಆದೇಶವನ್ನು ಕಾನೂನುಬದ್ಧವಾಗಿ ಪರಿಶೀಲಿಸಲು ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ.

ವಿಚಾರಣೆ ವೇಳೆ ಮೇಘಾಲಯ ಸರ್ಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಬಂಧನದ ವೇಳೆ ಕಾರಣಗಳನ್ನು ಸಮರ್ಪಕವಾಗಿ ತಿಳಿಸಿಲ್ಲ ಎಂಬ ಆಧಾರದ ಮೇಲೆ ಸೋನಂ ಸಲ್ಲಿಸಿದ್ದ ಹಿಂದಿನ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿತ್ತು. ನಂತರ ಪೊಲೀಸರು ದಾಖಲೆಗಳನ್ನು ಸಿದ್ಧಪಡಿಸುವಾಗ ಸಂಭವಿಸಿದ ಸಣ್ಣ ತಾಂತ್ರಿಕ ಲೋಪವನ್ನೇ ಆಧಾರವಾಗಿಟ್ಟುಕೊಂಡು ಹೈಕೋರ್ಟ್ ಜಾಮೀನು ನೀಡಿದೆ ಎಂದು ವಾದಿಸಿದರು.

ಈ ವೇಳೆ ಸುಪ್ರೀಂಕೋರ್ಟ್, ಸೋನಂ ಈಗಾಗಲೇ ಕೆಲವು ಕಾಲ ಜೈಲಿನಲ್ಲಿ ಕಳೆದಿರುವುದನ್ನು ಪರಿಗಣಿಸಿದೆ. ಅಪರಾಧದ ಸ್ವರೂಪ ಗಂಭೀರವಾಗಿದ್ದರೂ, “ಜಾಮೀನು ನಿಯಮ, ಜೈಲು ಅಪವಾದ” ಎಂಬ ನ್ಯಾಯತತ್ವವನ್ನು ಅನುಸರಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿತು. ಇದೇ ವೇಳೆ, ಪ್ರಕರಣವನ್ನು ಹೈಕೋರ್ಟ್ ನಿರ್ವಹಿಸಿದ ವಿಧಾನ ಕುರಿತು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಮುಂದಿನ ವಿಚಾರಣೆಯನ್ನು ಜುಲೈ 9ಕ್ಕೆ ನಿಗದಿಪಡಿಸಿದೆ.

ಪ್ರಕರಣದ ಹಿನ್ನೆಲೆ: ಮಧ್ಯಪ್ರದೇಶದ ಇಂದೋರ್ ನಿವಾಸಿಗಳಾದ ರಾಜಾ ರಘುವಂಶಿ ಮತ್ತು ಸೋನಂ ರಘುವಂಶಿ 2025ರ ಮೇ 23ರಂದು ಮೇಘಾಲಯದ ಸೋಹ್ರಾ ಪ್ರದೇಶಕ್ಕೆ ಹನಿಮೂನ್‌ಗೆ ತೆರಳಿದ್ದರು. ಬಳಿಕ ಇಬ್ಬರೂ ನಾಪತ್ತೆಯಾಗಿದ್ದು, ಜೂನ್ 2ರಂದು ರಾಜಾ ರಘುವಂಶಿ ಅವರ ಮೃತದೇಹ ಆಳವಾದ ಕಂದಕದಲ್ಲಿ ಪತ್ತೆಯಾಗಿತ್ತು.

ಈ ಪ್ರಕರಣದಲ್ಲಿ ಪತ್ನಿ ಸೋನಂ ರಘುವಂಶಿಯೇ ಪ್ರಮುಖ ಆರೋಪಿಯಾಗಿದ್ದು, ಆರ್ಥಿಕ ಲಾಭದ ಉದ್ದೇಶದಿಂದ ಬಾಡಿಗೆ ಹಂತಕರ ನೆರವಿನಿಂದ ಪತಿಯ ಕೊಲೆಗೆ ಸಂಚು ರೂಪಿಸಿದ್ದಾಳೆ ಎಂದು ಮೇಘಾಲಯ ಪೊಲೀಸರು ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಕಳೆದ ವರ್ಷದ ಜೂನ್‌ನಲ್ಲಿ ಸೋನಂ ಅವರನ್ನು ಬಂಧಿಸಲಾಗಿತ್ತು.

ನಂತರ ವಿಚಾರಣಾ ನ್ಯಾಯಾಲಯ ನೀಡಿದ್ದ ಜಾಮೀನನ್ನು ಮೇಘಾಲಯ ಹೈಕೋರ್ಟ್ ಎತ್ತಿಹಿಡಿದಿತ್ತು. ಬಂಧನ ವಾರಂಟ್ ಹಾಗೂ ಆರೋಪಗಳ ವಿವರಗಳನ್ನು ಪೊಲೀಸರು ಸಮರ್ಪಕವಾಗಿ ದಾಖಲಿಸದಿರುವುದು ಸೇರಿದಂತೆ ತನಿಖೆಯಲ್ಲಿ ತಾಂತ್ರಿಕ ಲೋಪಗಳಿವೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಇದೇ ಆದೇಶವನ್ನು ಪ್ರಶ್ನಿಸಿ ಮೇಘಾಲಯ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.

ಬಾಲಕನನ್ನು ಕೇರಳಕ್ಕೆ ಕರೆದೊಯ್ದು ಬಲವಂತದ ದುಡಿಮೆ; ಹಲ್ಲೆ-ಕೊಲೆ ಬೆದರಿಕೆ ಪ್ರಕರಣದಲ್ಲಿ ಮೂವರು ಪೊಲೀಸರ ಬಲೆಗೆ

0

ಉಡುಪಿ: 9ನೇ ತರಗತಿ ವಿದ್ಯಾರ್ಥಿಯನ್ನು ಅಪಹರಿಸಿ ಕೇರಳಕ್ಕೆ ಕರೆದೊಯ್ದು ಬಲವಂತವಾಗಿ ದುಡಿಸಿಕೊಂಡ ಪ್ರಕರಣವನ್ನು ಬ್ರಹ್ಮಾವರ ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ವಿಖ್ಯಾತ್ ಆಚಾರ್ಯ (19) ಮತ್ತು ಸುಚಿತ್ ನಾಯಕ್ (20) ಅವರನ್ನು ಬಂಧಿಸಲಾಗಿದ್ದು, ಓರ್ವ ಬಾಲಾಪರಾಧಿಯನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ಅಪ್ರಾಪ್ತ ಬಾಲಕನನ್ನು ವುಡ್ ಕಂಪನಿಯೊಂದರಲ್ಲಿ ಕೆಲಸ ಮಾಡಿಸಿದ್ದು ಮಾತ್ರವಲ್ಲದೆ, ಮನೆಗೆ ಕಳುಹಿಸಲು ನಿರಾಕರಿಸಿ ವೈರ್‌ನಿಂದ ಹಲ್ಲೆ ನಡೆಸಿ, ಚೂರಿ ತೋರಿಸಿ ಜೀವ ಬೆದರಿಕೆ ಹಾಕಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಬ್ರಹ್ಮಾವರ ಪೊಲೀಸರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದು, ಪ್ರಕರಣದ ಸಂಪೂರ್ಣ ಜಾಲವನ್ನು ಬಯಲಿಗೆಳೆಯಲು ತನಿಖೆ ತೀವ್ರಗೊಳಿಸಿದ್ದಾರೆ.

‘ಡಿ ಬಾಸ್’ ಜೈಕಾರದಿಂದ ಕೋರ್ಟ್‌ವರೆಗೆ! ದರ್ಶನ್‌ಗೆ ಫ್ಯಾನ್ಸ್‌ಗಳಿಂದಲೇ ಹೆಚ್ಚುತ್ತಿರುವ ಕಾನೂನು ಸಂಕಷ್ಟ

ಬೆಂಗಳೂರು: ದರ್ಶನ್‌ಗೆ ಇಂದು ಹೊರಗಿನ ಶತ್ರುಗಳಿಗಿಂತ ಅಂಧಾಭಿಮಾನಿಗಳೇ ದೊಡ್ಡ ಸಂಕಷ್ಟವಾಗುತ್ತಿರುವ ಚಿತ್ರಣ ಕಾಣಿಸುತ್ತಿದೆ. ‘ಡಿ ಬಾಸ್’ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುತ್ತಿರುವ ಕೆಲ ಅಭಿಮಾನಿಗಳ ನಡೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ಮತ್ತಷ್ಟು ಕಾನೂನು ಬಿಗಿ ಉಂಟುಮಾಡುವ ಲಕ್ಷಣಗಳು ಗೋಚರಿಸುತ್ತಿವೆ.

ಪ್ರಮುಖ ಸಾಕ್ಷಿ ಸಂದೀಪ್‌ಗೆ ಬೆದರಿಕೆ ಹಾಕಿದ ಆರೋಪದಲ್ಲಿ ಡಿ ಕಂಪನಿ ಫ್ಯಾನ್ ಪೇಜ್ ಅಡ್ಮಿನ್ ಪುನೀತ್ ಸೇರಿದಂತೆ ಮೂವರು ಬಂಧನವಾಗಿದ್ದಾರೆ. ಅಚ್ಚರಿಯ ಸಂಗತಿ ಎಂದರೆ, ಪುನೀತ್ ಇದೇ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ವ್ಯಕ್ತಿ. ಆದರೆ ಕಾನೂನಿಗೆ ಸಹಕರಿಸುವ ಬದಲು ಮತ್ತೊಬ್ಬ ಸಾಕ್ಷಿಯ ಹೇಳಿಕೆಯನ್ನು ಬದಲಾಯಿಸಲು ಯತ್ನಿಸಿದ್ದಾನೆ ಎಂಬ ಆರೋಪ ಈಗ ಆತನನ್ನೇ ಆರೋಪಿಗಳ ಪಟ್ಟಿಗೆ ಸೇರಿಸಿದೆ.

ಇದೇ ಪುನೀತ್ ಮಾಲೀಕತ್ವದ ಬಿಳಿ ಸ್ಕಾರ್ಪಿಯೋ ವಾಹನವನ್ನು ರೇಣುಕಾಸ್ವಾಮಿ ಮೃತದೇಹ ಸಾಗಿಸಲು ಬಳಸಲಾಗಿದೆ ಎಂದು ತನಿಖೆಯಲ್ಲಿ ಉಲ್ಲೇಖವಾಗಿದೆ. ವಾಹನವನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ.

ಇದರ ಹಿಂದೆ ಕೂಡ ದರ್ಶನ್ ಅಭಿಮಾನಿಗಳ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದವು. ನಟಿ ರಮ್ಯಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ನಿಂದನೆ, ಅತ್ಯಾಚಾರದ ಬೆದರಿಕೆ ಪ್ರಕರಣದಲ್ಲೂ ಹಲವರು ಬಂಧನವಾಗಿದ್ದರು.

ಸಾಕ್ಷಿಗಳಿಗೆ ಬೆದರಿಕೆ, ತನಿಖೆಗೆ ಅಡ್ಡಿ, ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುವ ಯತ್ನಗಳು ಪ್ರಕರಣವನ್ನು ಇನ್ನಷ್ಟು ಸಂಕೀರ್ಣಗೊಳಿಸಬಹುದು ಎಂದು ಕಾನೂನು ವಲಯ ಅಭಿಪ್ರಾಯಪಡುತ್ತಿದೆ. ಒಬ್ಬ ನಟನಿಗೆ ಅಭಿಮಾನಿಗಳು ಶಕ್ತಿಯಾಗಬೇಕು; ಆದರೆ ಕಾನೂನು ಉಲ್ಲಂಘಿಸುವ ಅಂಧಾಭಿಮಾನ ಕೊನೆಗೆ ಅದೇ ನಟನ ವಿರುದ್ಧದ ಪ್ರಕರಣವನ್ನು ಮತ್ತಷ್ಟು ಬಲಪಡಿಸುವ ಅಂಶವಾಗುವ ಸಾಧ್ಯತೆ ಹೆಚ್ಚಾಗಿದೆ.

ರಾಜ್ಯದಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆ ಕುರಿತು ಕ್ರಮಕ್ಕೆ ಆಗ್ರಹ: ಕೇಂದ್ರ ಚುನಾವಣಾ ಆಯೋಗಕ್ಕೆ ಎರಡು ಬಾರಿ ಪತ್ರ ಬರೆದ ಶೋಭಾ ಕರಂದ್ಲಾಜೆ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ 27 ವಾರ್ಡ್‌ಗಳಲ್ಲಿ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಕೈಗೊಂಡಿರುವ ಪ್ರತ್ಯೇಕ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ತುರ್ತು ಮಧ್ಯಪ್ರವೇಶ ಮಾಡುವಂತೆ ಕೇಂದ್ರ ಚುನಾವಣಾ ಆಯೋಗವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ. ಈ ಸಂಬಂಧ ಅವರು ಎರಡು ಬಾರಿ ಪತ್ರ ಬರೆದು ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಶೋಭಾ ಕರಂದ್ಲಾಜೆ, ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಜಿಬಿಎ ವ್ಯಾಪ್ತಿಯ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತ್ಯೇಕ ವೇಳಾಪಟ್ಟಿ ಹಾಗೂ ವಿಭಿನ್ನ ಕಟ್‌-ಆಫ್ ದಿನಾಂಕಗಳನ್ನು ನಿಗದಿಪಡಿಸಿ ಸಮಾನಾಂತರ ಎಸ್‌ಐಆರ್ ಪ್ರಕ್ರಿಯೆ ಆರಂಭಿಸಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.

ಇಂತಹ ಸಮಾನಾಂತರ ಪರಿಷ್ಕರಣೆ ಪ್ರಕ್ರಿಯೆಯಿಂದ ಮತದಾರರು, ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ಅಧಿಕಾರಿಗಳಲ್ಲಿ ಗೊಂದಲ ಉಂಟಾಗುವ ಸಾಧ್ಯತೆಯಿದ್ದು, ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಗೂ ಧಕ್ಕೆ ಉಂಟಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಜನಪ್ರತಿನಿಧಿತ್ವ ಕಾಯ್ದೆ-1950 ಹಾಗೂ ಮತದಾರರ ನೋಂದಣಿ ನಿಯಮಗಳು-1960ರ ಪ್ರಕಾರ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಸಿದ್ಧಪಡಿಸುವುದು, ಪರಿಷ್ಕರಿಸುವುದು, ಹೆಸರು ಸೇರ್ಪಡೆ ಮತ್ತು ತೆಗೆದುಹಾಕುವ ಅಧಿಕಾರ ಭಾರತ ಚುನಾವಣಾ ಆಯೋಗ ನೇಮಕ ಮಾಡುವ ಎಲೆಕ್ಟೋರಲ್ ರಿಜಿಸ್ಟ್ರೇಷನ್ ಅಧಿಕಾರಿಗಳಿಗೆ (ಇಆರ್‌ಒ) ಮಾತ್ರ ಇದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಭಾರತ ಚುನಾವಣಾ ಆಯೋಗ ಸಿದ್ಧಪಡಿಸುವ ಮತದಾರರ ಪಟ್ಟಿಯೇ ವಿಧಾನಸಭಾ ಕ್ಷೇತ್ರಗಳ ಅಧಿಕೃತ ಕಾನೂನುಬದ್ಧ ಮತದಾರರ ಪಟ್ಟಿಯಾಗಿದ್ದು, ಬಳಿಕ ಅದನ್ನೇ ರಾಜ್ಯ ಚುನಾವಣಾ ಆಯೋಗ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಳಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಸಂವಿಧಾನದ ಅನುಚ್ಛೇದ 243K ಹಾಗೂ 243ZA ಅಡಿಯಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಜವಾಬ್ದಾರಿ ಮಾತ್ರ ನೀಡಲಾಗಿದೆ. ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಡೆಸುವ ಸ್ವತಂತ್ರ ಅಧಿಕಾರ ರಾಜ್ಯ ಚುನಾವಣಾ ಆಯೋಗಕ್ಕೆ ಇಲ್ಲ. ಈ ಅಧಿಕಾರ ಸಂಪೂರ್ಣವಾಗಿ ಭಾರತ ಚುನಾವಣಾ ಆಯೋಗದ ವ್ಯಾಪ್ತಿಗೆ ಸೇರಿದೆ ಎಂದು ಶೋಭಾ ಕರಂದ್ಲಾಜೆ ಪ್ರತಿಪಾದಿಸಿದ್ದಾರೆ.

ಹೀಗಾಗಿ ಜಿಬಿಎ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜ್ಯ ಚುನಾವಣಾ ಆಯೋಗ ಕೈಗೊಂಡಿರುವ ಸಮಾನಾಂತರ ಎಸ್‌ಐಆರ್ ಪ್ರಕ್ರಿಯೆ ಸಂವಿಧಾನಾತ್ಮಕ ಹಾಗೂ ಕಾನೂನುಬದ್ಧ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಪ್ರಕ್ರಿಯೆಯಿಂದ ಅನಗತ್ಯ ಕೆಲಸದ ಪುನರಾವರ್ತನೆ, ಸಾರ್ವಜನಿಕ ಹಣದ ದುರುಪಯೋಗ, ಆಡಳಿತಾತ್ಮಕ ಗೊಂದಲ ಹಾಗೂ ಮತದಾರರ ಪಟ್ಟಿಯ ವಿಶ್ವಾಸಾರ್ಹತೆ ಕುರಿತು ಅನುಮಾನಗಳು ಮೂಡುವ ಸಾಧ್ಯತೆ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ತಿಳಿಸಿದ್ದಾರೆ.

ಸೆನ್ಸಾರ್‌ಗೂ ಮೊದಲೇ ‘ಜನ ನಾಯಗನ್’ ಲೀಕ್; 1.2 ಕೋಟಿ ಮಂದಿ ವೀಕ್ಷಣೆ, ಆರೋಪಿಗಳಿಗೆ ಜಾಮೀನು ಇಲ್ಲ

ಚೆನ್ನೈ: ಬಿಡುಗಡೆಯಾಗುವ ಮುನ್ನವೇ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಭಾರೀ ಪೈರಸಿ ದಾಳಿಗೆ ತುತ್ತಾಗಿದೆ. ಸೆನ್ಸಾರ್ ಪ್ರಮಾಣಪತ್ರ ಸಿಗುವ ಮೊದಲೇ ಸಿನಿಮಾ ಲೀಕ್ ಆಗಿದ್ದು, ಬರೋಬ್ಬರಿ 1.2 ಕೋಟಿ ಮಂದಿ ಚಿತ್ರ ವೀಕ್ಷಿಸಿದ್ದಾರೆ ಎಂದು ತಮಿಳುನಾಡು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಈ ಪ್ರಕರಣದಲ್ಲಿ 4ನೇ ಆರೋಪಿ ಎಸ್. ರಜಿನಿ ಹಾಗೂ 11ನೇ ಆರೋಪಿ ಜಯಪ್ರಕಾಶ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಸಿ. ಕುಮಾರಪ್ಪನ್ ವಜಾಗೊಳಿಸಿದ್ದಾರೆ. ಆರೋಪಿಗಳು ಬಿಡುಗಡೆಯಾದರೆ ಪ್ರಕರಣದ ಪ್ರಮುಖ ಡಿಜಿಟಲ್ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇದೆ ಎಂದು ಸರ್ಕಾರಿ ವಕೀಲರು ವಾದಿಸಿದರು.

ಸಿನಿಮಾ ತಮಿಳು ರಾಕರ್ಸ್ ಸೇರಿದಂತೆ ಹಲವು ಪೈರಸಿ ತಾಣಗಳಲ್ಲಿ ಹರಿದಾಡಿದ್ದು, ಕೋರ್ಟ್‌ನ ಮಧ್ಯಂತರ ತಡೆಯಾಜ್ಞೆ ಜಾರಿಗೆ ಬರುವಷ್ಟರಲ್ಲಿ ಕೋಟ್ಯಂತರ ಮಂದಿ ಚಿತ್ರ ಡೌನ್‌ಲೋಡ್ ಮಾಡಿ ವೀಕ್ಷಿಸಿದ್ದರು. ಈ ಪೈರಸಿಯಿಂದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್‌ಗೆ ಸರಿಪಡಿಸಲಾಗದ ಆರ್ಥಿಕ ನಷ್ಟ ಉಂಟಾಗಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 21 ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಾಥಮಿಕ ಚಾರ್ಜ್‌ಶೀಟ್ ಸಲ್ಲಿಕೆಯಾದರೂ ತನಿಖೆ ಇನ್ನೂ ಮುಂದುವರಿದಿದೆ. ನ್ಯಾಯಾಲಯ ಆರೋಪಿಗಳ ವಿರುದ್ಧದ ಆರೋಪಗಳನ್ನು ಗಂಭೀರವೆಂದು ಪರಿಗಣಿಸಿ ಜಾಮೀನು ನೀಡಲು ನಿರಾಕರಿಸಿದೆ.

ಅಮರನಾಥ ಯಾತ್ರಿಕರಿಗೆ ಪ್ರಧಾನಿ ಮೋದಿ ವಿಶೇಷ ಪತ್ರ; ಶಿವಭಕ್ತರಿಗೆ 5 ಮಹತ್ವದ ಸಂಕಲ್ಪಗಳ ಕರೆ

ನವದೆಹಲಿ: ಅಮರನಾಥ ಯಾತ್ರೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದಾದ್ಯಂತದ ಶಿವಭಕ್ತರಿಗೆ ವಿಶೇಷ ಪತ್ರ ಬರೆದು ಶುಭಾಶಯ ಕೋರಿದ್ದಾರೆ. ಭಗವಾನ್ ಅಮರನಾಥರ ಕೃಪೆಯಿಂದ ಪ್ರತಿಯೊಬ್ಬ ಯಾತ್ರಿಕರ ಪಯಣ ಸುರಕ್ಷಿತ, ಸುಖಕರ ಹಾಗೂ ಮಂಗಳಕರವಾಗಿರಲಿ ಎಂದು ಹಾರೈಸಿರುವ ಪ್ರಧಾನಿ, ಯಾತ್ರೆಯನ್ನು ಕೇವಲ ಧಾರ್ಮಿಕ ಆಚರಣೆಯಲ್ಲ, ಭಕ್ತಿ, ಆತ್ಮಸಾಕ್ಷಾತ್ಕಾರ ಹಾಗೂ ರಾಷ್ಟ್ರೀಯ ಏಕತೆಯ ಸಂಕೇತ ಎಂದು ಬಣ್ಣಿಸಿದ್ದಾರೆ.

ಯಾತ್ರೆಯ ಯಶಸ್ವಿ ಆಯೋಜನೆಗಾಗಿ ಶ್ರಮಿಸುತ್ತಿರುವ ಭದ್ರತಾ ಪಡೆಗಳು, ಆಡಳಿತ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ಹಾಗೂ ಸ್ವಯಂಸೇವಕರ ಸೇವೆಯನ್ನು ಪ್ರಧಾನಿ ವಿಶೇಷವಾಗಿ ಶ್ಲಾಘಿಸಿದ್ದಾರೆ.

ಇದೇ ವೇಳೆ ಯಾತ್ರಿಕರಿಗೆ ಐದು ಮಹತ್ವದ ಸಂಕಲ್ಪಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ. ಯಾತ್ರಾ ಮಾರ್ಗದಲ್ಲಿ ಸ್ವಚ್ಛತೆ ಕಾಪಾಡುವುದು, ಆಡಳಿತ ಮತ್ತು ಭದ್ರತಾ ಪಡೆಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ‘ವೋಕಲ್ ಫಾರ್ ಲೋಕಲ್’ ಅಭಿಯಾನದಡಿ ಯಾತ್ರಾ ವೆಚ್ಚದ ಕನಿಷ್ಠ ಶೇ.10ರಷ್ಟು ಮೊತ್ತವನ್ನು ಜಮ್ಮು-ಕಾಶ್ಮೀರದ ಸ್ಥಳೀಯ ಉತ್ಪನ್ನಗಳ ಖರೀದಿಗೆ ಮೀಸಲಿಡುವುದು, ‘ಏಕ್ ಪೇಡ್ ಮಾಂ ಕೆ ನಾಮ್’ ಅಭಿಯಾನದಡಿ ಒಂದು ಸಸಿ ನೆಡುವುದು ಹಾಗೂ ‘ನೇಷನ್ ಫಸ್ಟ್’ ಸಂಕಲ್ಪದೊಂದಿಗೆ ವಿಕಸಿತ ಭಾರತದ ನಿರ್ಮಾಣಕ್ಕೆ ಕೈಜೋಡಿಸುವಂತೆ ಪ್ರಧಾನಿ ಕರೆ ನೀಡಿದ್ದಾರೆ.