ಚೆನ್ನೈ: ಬಿಡುಗಡೆಯಾಗುವ ಮುನ್ನವೇ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಭಾರೀ ಪೈರಸಿ ದಾಳಿಗೆ ತುತ್ತಾಗಿದೆ. ಸೆನ್ಸಾರ್ ಪ್ರಮಾಣಪತ್ರ ಸಿಗುವ ಮೊದಲೇ ಸಿನಿಮಾ ಲೀಕ್ ಆಗಿದ್ದು, ಬರೋಬ್ಬರಿ 1.2 ಕೋಟಿ ಮಂದಿ ಚಿತ್ರ ವೀಕ್ಷಿಸಿದ್ದಾರೆ ಎಂದು ತಮಿಳುನಾಡು ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ.
ಈ ಪ್ರಕರಣದಲ್ಲಿ 4ನೇ ಆರೋಪಿ ಎಸ್. ರಜಿನಿ ಹಾಗೂ 11ನೇ ಆರೋಪಿ ಜಯಪ್ರಕಾಶ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಸಿ. ಕುಮಾರಪ್ಪನ್ ವಜಾಗೊಳಿಸಿದ್ದಾರೆ. ಆರೋಪಿಗಳು ಬಿಡುಗಡೆಯಾದರೆ ಪ್ರಕರಣದ ಪ್ರಮುಖ ಡಿಜಿಟಲ್ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇದೆ ಎಂದು ಸರ್ಕಾರಿ ವಕೀಲರು ವಾದಿಸಿದರು.
ಸಿನಿಮಾ ತಮಿಳು ರಾಕರ್ಸ್ ಸೇರಿದಂತೆ ಹಲವು ಪೈರಸಿ ತಾಣಗಳಲ್ಲಿ ಹರಿದಾಡಿದ್ದು, ಕೋರ್ಟ್ನ ಮಧ್ಯಂತರ ತಡೆಯಾಜ್ಞೆ ಜಾರಿಗೆ ಬರುವಷ್ಟರಲ್ಲಿ ಕೋಟ್ಯಂತರ ಮಂದಿ ಚಿತ್ರ ಡೌನ್ಲೋಡ್ ಮಾಡಿ ವೀಕ್ಷಿಸಿದ್ದರು. ಈ ಪೈರಸಿಯಿಂದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ಗೆ ಸರಿಪಡಿಸಲಾಗದ ಆರ್ಥಿಕ ನಷ್ಟ ಉಂಟಾಗಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 21 ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಾಥಮಿಕ ಚಾರ್ಜ್ಶೀಟ್ ಸಲ್ಲಿಕೆಯಾದರೂ ತನಿಖೆ ಇನ್ನೂ ಮುಂದುವರಿದಿದೆ. ನ್ಯಾಯಾಲಯ ಆರೋಪಿಗಳ ವಿರುದ್ಧದ ಆರೋಪಗಳನ್ನು ಗಂಭೀರವೆಂದು ಪರಿಗಣಿಸಿ ಜಾಮೀನು ನೀಡಲು ನಿರಾಕರಿಸಿದೆ.



