ಕೊಪ್ಪಳ: ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ಪತ್ನಿಯೊಂದಿಗೆ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಹನುಮ ದೇವರ ದರ್ಶನ ಪಡೆದರು.
ಅಂಜನಾದ್ರಿ ಬೆಟ್ಟದ 575 ಮೆಟ್ಟಿಲುಗಳನ್ನು ಏರಿ ದೇವಸ್ಥಾನ ತಲುಪಿದ ದ್ರಾವಿಡ್ ದಂಪತಿ, ಹನುಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ದೇವಾಲಯದಲ್ಲಿ ಕೆಲಕಾಲ ಕಾಲ ಕಳೆಯುವ ಮೂಲಕ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಿದರು.
ಇದಕ್ಕೂ ಮುನ್ನ ಬುಧವಾರ ರಾಹುಲ್ ದ್ರಾವಿಡ್ ಅವರು ವಿಶ್ವವಿಖ್ಯಾತ ಹಂಪಿ ಕ್ಷೇತ್ರಕ್ಕೆ ಭೇಟಿ ನೀಡಿ ವಿರೂಪಾಕ್ಷೇಶ್ವರ ದೇವರ ದರ್ಶನ ಪಡೆದಿದ್ದರು. ಪ್ರವಾಸದ ವೇಳೆ ಸಾಸಿವೆಕಾಳು ಗಣೇಶ, ಹೇಮಕೂಟ, ಕೃಷ್ಣ ದೇವಸ್ಥಾನ, ಉಗ್ರ ನರಸಿಂಹ ಹಾಗೂ ಬಡವಿಲಿಂಗ ದೇವಾಲಯಗಳಿಗೂ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಬಳಿಕ ಮಧ್ಯಾಹ್ನ ಚಕ್ರತೀರ್ಥದಲ್ಲಿರುವ ಕೋದಂಡರಾಮ ದೇವಾಲಯ, ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನ ಹಾಗೂ ಅಚ್ಯುತರಾಯ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.



