ಚೆನ್ನೈ: ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿಯಾದ ಘಟನೆಯನ್ನು ತಮಿಳುನಾಡು ಸಿಎಂ ವಿಜಯ್ ಖಂಡಿಸಿದ ಬೆನ್ನಲ್ಲೇ, ಮೃತ ಕುಟುಂಬಕ್ಕೆ ತಲಾ ₹10 ಲಕ್ಷ ಪರಿಹಾರವನ್ನು ನೆರೆ ರಾಜ್ಯದ ಸರ್ಕಾರ ಘೋಷಿಸಿದೆ.
ತಮಿಳುನಾಡು ವಿಧಾನಸಭೆಯಲ್ಲೂ ಹನೂರು ಶೂಟೌಟ್ ವಿಚಾರ ಪ್ರಸ್ತಾಪವಾಗಿದ್ದು, ಡಿಎಂಕೆ ಮತ್ತು ಎಐಡಿಎಂಕೆ ಮುಖಂಡರು ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ನೀಡುವುದಾಗಿ ಅರಣ್ಯ ಸಚಿವ ರಂಜಿತ್ ಕುಮಾರ್ ಘೋಷಿಸಿದ್ದಾರೆ. ಜೊತೆಗೆ, ಕರ್ನಾಟಕ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಆಗ್ರಹವೂ ಸದನದಲ್ಲಿ ವ್ಯಕ್ತವಾಗಿದೆ.
ಹನೂರಿನಲ್ಲಿ ನಡೆದಿರುವ ಘಟನೆ ಕುರಿತು ತಮಿಳುನಾಡು ವಿಧಾನಸಭೆಯಲ್ಲಿ ಭಾರಿ ಚರ್ಚೆಯಾಗಿದೆ. ಮೃತರೆಲ್ಲರೂ ತಮಿಳುನಾಡು ಮೂಲದವರಾಗಿದ್ದು, ಮೆಟ್ಟೂರು ಜಲಾಶಯ ನಿರ್ಮಾಣದ ಕಾರಣದಿಂದ ಹನೂರಿನಲ್ಲಿ ವಾಸವಿದ್ದರು ಎಂದು ಸದನದಲ್ಲಿ ಪ್ರಸ್ತಾಪವಾಗಿದೆ. ಅವರೆಲ್ಲ ತಮಿಳರಾಗಿದ್ದು, ಅವರ ರಕ್ಷಣೆಯಾಗಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಅರಣ್ಯಾಧಿಕಾರಿಗಳು ಬಿಡುಗಡೆ ಮಾಡಿದ್ದ ಫೋಟೋಗಳಲ್ಲಿ ಸ್ಟಿಕ್ಕರ್ ತೆಗೆಯದ ಹೊಸ ಚಪ್ಪಲಿ ಇರುವ ಬಗ್ಗೆಯೂ ಸದನದಲ್ಲಿ ಚರ್ಚೆಯಾಗಿದೆ. ಮೃತರ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಬೇಕು ಮತ್ತು ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ.
ಮತ್ತೊಂದೆಡೆ, ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ತೋಮಿಯರ್ಪಾಳ್ಯಕ್ಕೆ ತಮಿಳುನಾಡಿನ ಮಾಜಿ ಶಾಸಕರ ತಂಡ ಭೇಟಿ ನೀಡಿದೆ. ತೋಮಿಯರ್ಪಾಳ್ಯದ ಚರ್ಚ್ನಲ್ಲಿ ಘಟನೆ ಸಂಬಂಧ ಸಭೆಯನ್ನೂ ನಡೆಸಲಾಗಿದೆ. ತಮಿಳರ ಹತ್ಯೆಯಾಗಿದೆ ಎಂದು ಉಲ್ಲೇಖಿಸಿ ಘಟನೆಯನ್ನು ಖಂಡಿಸಿ ತಮಿಳುನಾಡು ಸಿಎಂ ವಿಜಯ್ ಎಕ್ಸ್ ಪೋಸ್ಟ್ ಮಾಡಿದ್ದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆಗಳು ನಡೆದಿವೆ.



