HomeBengaluru Cityವಿಧಾನಪರಿಷತ್ ಉಪಸಭಾಪತಿಯಾಗಿ ಉಮಾಶ್ರೀ ಅವಿರೋಧ ಆಯ್ಕೆ

ವಿಧಾನಪರಿಷತ್ ಉಪಸಭಾಪತಿಯಾಗಿ ಉಮಾಶ್ರೀ ಅವಿರೋಧ ಆಯ್ಕೆ

For Dai;y Updates Join Our whatsapp Group

ಬೆಂಗಳೂರು: ವಿಧಾನಪರಿಷತ್‌ನ ತೆರವಾಗಿದ್ದ ಉಪಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ ಸದಸ್ಯೆ ಹಾಗೂ ಹಿರಿಯ ನಟಿ ಉಮಾಶ್ರೀ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಡಳಿತ ಪಕ್ಷಕ್ಕೆ ಬಹುಮತವಿದ್ದರೂ, ವಿಪಕ್ಷದಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಉಮಾಶ್ರೀ ಅವರ ಆಯ್ಕೆ ಅವಿರೋಧವಾಗಿ ನಡೆದಿದೆ.

ಈ ಹಿಂದೆ ಉಪಸಭಾಪತಿಯಾಗಿದ್ದ ಎಂ.ಕೆ. ಪ್ರಾಣೇಶ್ ಅವರು ರಾಜೀನಾಮೆ ನೀಡಿದ್ದರಿಂದ ಸ್ಥಾನ ತೆರವಾಗಿತ್ತು. ಈ ಸ್ಥಾನಕ್ಕೆ ಸೋಮವಾರ ಉಮಾಶ್ರೀ ಅವರು ನಾಮಪತ್ರ ಸಲ್ಲಿಸಿದ್ದರು.

ಸಭಾನಾಯಕ ಯತೀಂದ್ರ ಸಿದ್ದರಾಮಯ್ಯ ಅವರು ಉಮಾಶ್ರೀ ಅವರನ್ನು ಅಭಿನಂದಿಸಿ, ನಟನೆಯ ಮೂಲಕ ದೇಶದ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರು ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಚಿತ್ರರಂಗದ ಬಳಿಕ ರಾಜಕೀಯ ಪ್ರವೇಶಿಸಿ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಚುನಾವಣಾ ರಾಜಕಾರಣದಲ್ಲೂ ಸೋಲು-ಗೆಲುವುಗಳನ್ನು ಕಂಡಿದ್ದಾರೆ ಎಂದು ಹೇಳಿದರು.

2013ರಲ್ಲಿ ತೇರದಾಳ ಕ್ಷೇತ್ರದಿಂದ ಗೆದ್ದು ಮೊದಲ ಬಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಉಮಾಶ್ರೀ ಅವರು ಇದೀಗ ಮೇಲ್ಮನೆ ಉಪಸಭಾಪತಿಯಾಗಿ ಆಯ್ಕೆಯಾಗಿರುವುದು ಸಂತಸದ ವಿಚಾರ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.

‘ಉಮಾಶ್ರೀ ಅಕ್ಕ ದಾರಿ ತಪ್ಪಲ್ಲ’: ಛಲವಾದಿ ನಾರಾಯಣಸ್ವಾಮಿ

ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕೂಡ ಉಮಾಶ್ರೀ ಅವರನ್ನು ಅಭಿನಂದಿಸಿದರು. ರಾಜ್ಯ ಕಂಡ ಅತ್ಯುತ್ತಮ ನಟಿಯರಲ್ಲಿ ಒಬ್ಬರಾಗಿರುವ ಉಮಾಶ್ರೀ ಅವರು ಮೂರು ದಶಕಗಳಿಂದ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ ಎಂದರು.

“ಸಭಾಪತಿಗಳು ದಾರಿ ತಪ್ಪಿದರೂ ಉಮಾಶ್ರೀ ಅಕ್ಕ ದಾರಿ ತಪ್ಪಲ್ಲ. ಅವರು ಎಲ್ಲರಿಗೂ ನ್ಯಾಯ ಒದಗಿಸುತ್ತಾರೆ ಎಂಬ ವಿಶ್ವಾಸವಿದೆ” ಎಂದು ಅವರು ಹೇಳಿದರು.

ನಟನೆ ಹಾಗೂ ಜನಪ್ರಿಯತೆ ಉತ್ತುಂಗದಲ್ಲಿದ್ದ ಸಂದರ್ಭದಲ್ಲೇ ಉಮಾಶ್ರೀ ರಾಜಕೀಯಕ್ಕೆ ಬಂದರು. 1994ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಸಂದರ್ಭದಲ್ಲಿ ಎಸ್. ಬಂಗಾರಪ್ಪ ಅವರು ಅವರನ್ನು ಬೆಳೆಸುವಂತೆ ಸೂಚಿಸಿದ್ದರು ಎಂದು ಛಲವಾದಿ ನಾರಾಯಣಸ್ವಾಮಿ ನೆನಪಿಸಿಕೊಂಡರು.

ರಾಜಕೀಯ ಜೀವನದಲ್ಲಿ ಇಲ್ಲಿಯವರೆಗೆ ಯಾವುದೇ ರೀತಿಯ ಎಡವಟ್ಟು ಮಾಡಿಕೊಳ್ಳದೆ ಬಂದಿರುವ ಉಮಾಶ್ರೀ ಅವರ ಸಾಧನೆ ಗಮನಾರ್ಹ ಎಂದು ಅವರು ಶ್ಲಾಘಿಸಿದರು.

400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ: ಬೋಜೇಗೌಡ

ಜೆಡಿಎಸ್ ಸದಸ್ಯ ಬೋಜೇಗೌಡ ಅವರು ಕೂಡ ಉಮಾಶ್ರೀ ಅವರನ್ನು ಅಭಿನಂದಿಸಿದರು. ಬಡತನದ ನಡುವೆಯೂ ಇಬ್ಬರು ಮಕ್ಕಳನ್ನು ಉತ್ತಮವಾಗಿ ಬೆಳೆಸಿ, ಒಬ್ಬರನ್ನು ವಕೀಲರನ್ನಾಗಿ ಹಾಗೂ ಮತ್ತೊಬ್ಬರನ್ನು ವೈದ್ಯರನ್ನಾಗಿ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉಮಾಶ್ರೀ ಅವರು ತಮ್ಮ ನಟನಾ ಜೀವನದಲ್ಲಿ ಸುಮಾರು 400 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಎಂದು ಹೇಳಿದ ಬೋಜೇಗೌಡ, ಹಿರಿಯ ಕಲಾವಿದರಾದ ಎನ್‌.ಎಸ್‌. ರಾವ್ ಸೇರಿದಂತೆ ಹಲವು ಪ್ರಮುಖ ನಟರೊಂದಿಗೆ ಕೆಲಸ ಮಾಡಿರುವ ಅವರ ಸಿನಿ ಬದುಕಿನ ಅನುಭವಗಳನ್ನು ಸ್ಮರಿಸಿದರು.

ಉಮಾಶ್ರೀ ಅವರು ಮೇಲ್ಮನೆ ಉಪಸಭಾಪತಿಯಾಗಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಅವರು ಶುಭ ಹಾರೈಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img