ಬೆಂಗಳೂರು: ಬೆಂಗಳೂರಿನಲ್ಲಿ ಹವಾಮಾನ ಬದಲಾವಣೆಯ ನಡುವೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ.
ಬೆಳಗ್ಗೆ ಬಿಸಿಲು, ಸಂಜೆ ಮಳೆ ಎಂಬ ವಾತಾವರಣದಿಂದ ಜ್ವರ, ಕೆಮ್ಮು, ನೆಗಡಿ, ವಾಂತಿ ಹಾಗೂ ಬೇಧಿಯಂತಹ ಸಮಸ್ಯೆಗಳಿಂದ ಆಸ್ಪತ್ರೆಗೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.
ಮಕ್ಕಳಿಂದ ಹಿಡಿದು ಹಿರಿಯರವರೆಗೂ ಹಲವರು ವೈರಲ್ ಸೋಂಕಿನ ಲಕ್ಷಣಗಳಿಂದ ಬಳಲುತ್ತಿದ್ದಾರೆ. ನಗರದ ಕೆ.ಸಿ. ಜನರಲ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಸಿ.ವಿ. ರಾಮನ್ ನಗರ ಆಸ್ಪತ್ರೆ ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ.
ಒಂದೇ ವಾರದಲ್ಲಿ ದಾಖಲಾಗಿರುವ ಪ್ರಕರಣಗಳ ಅಂಕಿ-ಅಂಶ ನೋಡಿದರೆ, ವಾಂತಿ ಮತ್ತು ಬೇಧಿಗೆ ಸಂಬಂಧಿಸಿದಂತೆ 3,297 ಪ್ರಕರಣಗಳು ವರದಿಯಾಗಿವೆ.
ಇನ್ನು ತೀವ್ರ ಉಸಿರಾಟದ ಸೋಂಕು ಅಂದರೆ ಎಸ್‌ಎಆರ್‌ಐನ 268 ಪ್ರಕರಣಗಳು, ಇನ್ಫ್ಲುಯೆನ್ಜಾದ 274 ಪ್ರಕರಣಗಳು ದಾಖಲಾಗಿವೆ.
ಇದರ ಜೊತೆಗೆ ಇಲಿ ಜ್ವರದ 94 ಪ್ರಕರಣಗಳು, ಡೆಂಗ್ಯೂನ 242 ಪ್ರಕರಣಗಳು ಹಾಗೂ ಮಲೇರಿಯಾದ 128 ಪ್ರಕರಣಗಳು ವರದಿಯಾಗಿವೆ.
ಹವಾಮಾನದಲ್ಲಿನ ನಿರಂತರ ಬದಲಾವಣೆ ಮತ್ತು ಮಳೆಯ ಹಿನ್ನೆಲೆಯಲ್ಲಿ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಜನರು ಮುನ್ನೆಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ವಿಶೇಷವಾಗಿ ಮಳೆ ಬಂದ ಪ್ರದೇಶಗಳಲ್ಲಿ ಕುಡಿಯುವ ನೀರಿನ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ನೀರನ್ನು ಕಾಯಿಸಿ ಆರಿಸಿದ ಬಳಿಕ ಕುಡಿಯುವಂತೆ ಸೂಚಿಸಲಾಗಿದೆ.
ಜ್ವರ, ಕೆಮ್ಮು, ನೆಗಡಿ, ವಾಂತಿ, ಬೇಧಿ ಅಥವಾ ಅತಿಯಾದ ಸುಸ್ತಿನಂತಹ ಲಕ್ಷಣಗಳು ಕಾಣಿಸಿಕೊಂಡರೆ ಮನೆಯಲ್ಲೇ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಹೀಗಾಗಿ, ಬೆಂಗಳೂರಿನಲ್ಲಿ ಬದಲಾಗುತ್ತಿರುವ ಹವಾಮಾನದ ನಡುವೆ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದೆ.



