ಬೆಂಗಳೂರು: ‘ರಾಮಾಯಣ’ ಸಿನಿಮಾದ ಟ್ರೇಲರ್ ಬಿಡುಗಡೆಯಾದ ಬಳಿಕ ರಾವಣನ ಪಾತ್ರದ ಧ್ವನಿ ಕುರಿತು ಹುಟ್ಟಿಕೊಂಡಿದ್ದ ಭಾರೀ ಚರ್ಚೆಗೆ ಇದೀಗ ತೆರೆ ಬಿದ್ದಿದೆ. ಟ್ರೇಲರ್‌ನಲ್ಲಿ ಕೇಳಿಬಂದ ಗಂಭೀರ ಧ್ವನಿ ರಾಕಿಂಗ್ ಸ್ಟಾರ್ ಯಶ್ ಅವರದ್ದಲ್ಲ, ನಟ ದೇವರಾಜ್ ಅವರದ್ದು ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ ಈ ಸುದ್ದಿ ಸಂಪೂರ್ಣ ಸುಳ್ಳು ಎಂದು ನಟ ಪ್ರಜ್ವಲ್ ದೇವರಾಜ್ ಸ್ಪಷ್ಟಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಜ್ವಲ್, ವದಂತಿ ಗಮನಕ್ಕೆ ಬಂದ ಕೂಡಲೇ ಯಶ್ ಅವರಿಗೆ ತಾವೇ ಕರೆ ಮಾಡಿ ಈ ಕುರಿತು ಮಾತನಾಡಿದ್ದಾಗಿ ಹೇಳಿದ್ದಾರೆ. ಈ ವೇಳೆ ದೇವರಾಜ್ ಕೂಡ ಯಶ್ ಅವರೊಂದಿಗೆ ಮಾತನಾಡಿದ್ದರು.
ತಮ್ಮ ಧ್ವನಿಯನ್ನು ದೇವರಾಜ್ ಅವರ ಗಂಭೀರ ಧ್ವನಿಗೆ ಹೋಲಿಸುತ್ತಿರುವ ಬಗ್ಗೆ ಯಶ್ ಸಂತಸ ವ್ಯಕ್ತಪಡಿಸಿದ್ದರು. ಹಿರಿಯ ನಟನ ಧ್ವನಿಗೆ ತಮ್ಮ ಧ್ವನಿಯನ್ನು ಹೋಲಿಸುತ್ತಿರುವುದೇ ಹೆಮ್ಮೆಯ ವಿಚಾರ ಎಂದು ಯಶ್ ಹೇಳಿದ್ದಾಗಿ ಪ್ರಜ್ವಲ್ ತಿಳಿಸಿದ್ದಾರೆ.
ಹೀಗಾಗಿ ‘ರಾಮಾಯಣ’ದಲ್ಲಿ ರಾವಣನಾಗಿ ಕೇಳಿಬಂದಿರುವ ಧ್ವನಿ ಸ್ವತಃ ಯಶ್ ಅವರದ್ದೇ ಎಂಬುದು ಇದೀಗ ಖಚಿತವಾಗಿದೆ. ಟ್ರೇಲರ್‌ನಲ್ಲಿ ಕೇಳಿಬಂದ ಅವರ ಗಂಭೀರ ಕಂಠ ರಾವಣನ ಪಾತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸಿದ್ದು, ಅಭಿಮಾನಿಗಳಲ್ಲೂ ಕುತೂಹಲ ಹೆಚ್ಚಿಸಿದೆ.
ಇತ್ತ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ಬಿಡುಗಡೆಯಾಗಲು ಸಜ್ಜಾಗಿದೆ. ‘ರಾಮಾಯಣ’ ಕೂಡ ದೀಪಾವಳಿ ಸಂದರ್ಭದಲ್ಲಿ ತೆರೆಗೆ ಬರಲು ಸಿದ್ಧವಾಗುತ್ತಿದ್ದು, ಒಂದೇ ವರ್ಷದಲ್ಲಿ ಯಶ್ ಅವರ ಎರಡು ಬಹುನಿರೀಕ್ಷಿತ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲಿವೆ.



