ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಮಾಜಿ ಕಾಂಗ್ರೆಸ್ ಸಂಸದ ಸಜ್ಜನ್ ಕುಮಾರ್ (80) ನಿಧನರಾಗಿದ್ದಾರೆ. ಅಸ್ವಸ್ಥರಾಗಿದ್ದ ಅವರನ್ನು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಸಾವಿಗೆ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ.
1984ರ ಅಕ್ಟೋಬರ್ 31ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯಾದ ಬಳಿಕ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಸಿಖ್ ಸಮುದಾಯದ ವಿರುದ್ಧ ಭೀಕರ ಹಿಂಸಾಚಾರ ನಡೆದಿತ್ತು. ದೆಹಲಿಯೊಂದರಲ್ಲೇ 3,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.
ಈ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆಯಲ್ಲಿ ಸಜ್ಜನ್ ಕುಮಾರ್ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ದೆಹಲಿ ಪೊಲೀಸರ ತನಿಖೆಯ ಪ್ರಕಾರ, ದಂಗೆಗೆ ಪ್ರಚೋದನೆ ನೀಡಿದ ಪ್ರಮುಖ ವ್ಯಕ್ತಿಗಳಲ್ಲಿ ಸಜ್ಜನ್ ಕುಮಾರ್ ಕೂಡ ಒಬ್ಬರಾಗಿದ್ದರು.
ಆದರೆ ದಂಗೆಯ ಬಳಿಕ ಸುಮಾರು ಮೂರು ದಶಕಗಳ ಕಾಲ ನಡೆದ ವಿವಿಧ ತನಿಖೆಗಳು ಹಾಗೂ ವಿಚಾರಣೆಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಬೆಳವಣಿಗೆಗಳು ನಡೆದಿದ್ದವು. ಜಸ್ಟಿಸ್ ರಂಗನಾಥ್ ಮಿಶ್ರಾ ಆಯೋಗ ಸೇರಿದಂತೆ ಆರಂಭಿಕ ತನಿಖಾ ಸಮಿತಿಗಳ ವರದಿಗಳಲ್ಲಿ ಸಜ್ಜನ್ ಕುಮಾರ್ ಅವರ ಹೆಸರು ನೇರವಾಗಿ ಪ್ರಸ್ತಾಪವಾಗಿರಲಿಲ್ಲ.
2015ರಲ್ಲಿ ಕೇಂದ್ರ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿ, ಈ ಹಿಂದೆ ಮುಚ್ಚಿಹೋಗಿದ್ದ ಪ್ರಕರಣಗಳನ್ನು ಮರುಪರಿಶೀಲಿಸಲು ಮುಂದಾದ ಬಳಿಕ ಪ್ರಕರಣಕ್ಕೆ ಮತ್ತಷ್ಟು ವೇಗ ಸಿಕ್ಕಿತ್ತು. ನಂತರ ಸಜ್ಜನ್ ಕುಮಾರ್ ವಿರುದ್ಧದ ಪ್ರಕರಣದಲ್ಲಿ ನ್ಯಾಯಾಂಗ ಪ್ರಕ್ರಿಯೆ ಮುಂದುವರಿದು, ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.



