ಬೆಂಗಳೂರು: ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಗೊರಗುಂಟೆಪಾಳ್ಯ ಸಿಗ್ನಲ್ ಬಳಿ ಬೃಹತ್ ಮರವೊಂದು ಲಾರಿ ಮೇಲೆ ಮುರಿದು ಬಿದ್ದಿದೆ.
ಬೆಳಗಿನ ಜಾವ ಸುಮಾರು 5.30ರ ವೇಳೆಗೆ ಘಟನೆ ನಡೆದಿದ್ದು, ಸುಮ್ಮನಹಳ್ಳಿ–ತುಮಕೂರು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಸಿಗ್ನಲ್‌ನಲ್ಲಿ ಎರಡು ಕಾರುಗಳು ಹಾಗೂ ಒಂದು ಲಾರಿ ನಿಂತಿದ್ದ ವೇಳೆ ಏಕಾಏಕಿ ಬೃಹತ್ ಮರ ಲಾರಿ ಮೇಲೆ ಬಿದ್ದಿದೆ. ಮರ ಲಾರಿ ಮೇಲೆ ಬಿದ್ದ ಪರಿಣಾಮ ಎರಡು ಕಾರುಗಳು ಅಪಾಯದಿಂದ ಪಾರಾಗಿವೆ. ಮರ ಕಾರುಗಳ ಮೇಲೆ ಬಿದ್ದಿದ್ದರೆ ಭಾರೀ ಹಾನಿಯಾಗುವ ಸಾಧ್ಯತೆ ಇತ್ತು. ಲಾರಿ ಚಾಲಕ ಕೂಡ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಮರ ಬಿದ್ದ ಹಿನ್ನೆಲೆಯಲ್ಲಿ ಗೊರಗುಂಟೆಪಾಳ್ಯ–ಔಟರ್ ರಿಂಗ್ ರೋಡ್ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಜಿಬಿಎ ಸಿಬ್ಬಂದಿ ಹಾಗೂ ಸಂಚಾರ ಪೊಲೀಸರು ಸ್ಥಳಕ್ಕೆ ತೆರಳಿ ಮರ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇನ್ನು, ಬೆಂಗಳೂರಿನಲ್ಲಿ ತಡರಾತ್ರಿ ಧಾರಾಕಾರ ಮಳೆಯಾಗಿದ್ದು, ನಗರದ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಪ್ರಮುಖ ರಸ್ತೆಗಳಲ್ಲೂ ಮಳೆ ನೀರು ನದಿಯಂತೆ ಹರಿದಿದೆ. ಅ.5ರ ಸಂಜೆ ಸುಮಾರು ಒಂದು ಗಂಟೆ ಮಳೆಯಾಗಿದ್ದರೆ, ರಾತ್ರಿ 10 ಗಂಟೆಯ ಬಳಿಕ ಮತ್ತೆ ಹಲವು ಪ್ರದೇಶಗಳಲ್ಲಿ ಭಾರೀ ಮಳೆ ಸುರಿದಿದೆ. ಸತತ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.



