ಅಬುಜಾ: ಬೆಳಗ್ಗೆ ಎಂದಿನಂತೆ ಕಾರ್ಯಾಚರಣೆಗೆ ತೆರಳಿದ್ದ ಸೇನಾ ವಿಮಾನವೊಂದು ಏಕಾಏಕಿ ಜೌಗು ಪ್ರದೇಶಕ್ಕೆ ಪತನಗೊಂಡಿದ್ದು, ವಿಮಾನದಲ್ಲಿದ್ದ 32 ಮಂದಿ ಮೃತಪಟ್ಟಿದ್ದಾರೆ.
ನೈಜೀರಿಯಾದ ಒಂಡೋ ರಾಜ್ಯದ ಇಗ್ಬೊಕೊಡಾ ಬಳಿ ಈ ಭೀಕರ ಘಟನೆ ನಡೆದಿದೆ.
ಬೆನಿನ್ ನಗರದಿಂದ ಲಾಗೋಸ್ಗೆ ತೆರಳುತ್ತಿದ್ದ ಎಟಿಆರ್-42 ವಿಮಾನ ಬೆಳಗ್ಗೆ ಸುಮಾರು 9 ಗಂಟೆಗೆ ನೌಕಾ ನೆಲೆಯ ಸಮೀಪ ಪತನಗೊಂಡಿದೆ. ವಿಮಾನದಲ್ಲಿ 25 ಪ್ರಯಾಣಿಕರು ಹಾಗೂ ಏಳು ಸಿಬ್ಬಂದಿ ಇದ್ದರು ಎನ್ನಲಾಗಿದ್ದು, ಎಲ್ಲರೂ ಮೃತಪಟ್ಟಿದ್ದಾರೆ.
ವಿಮಾನ ಪತನದ ವೇಳೆ ಭಾರಿ ಶಬ್ದ ಕೇಳಿಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಜೌಗು ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದವರು ಘಟನೆ ಬಗ್ಗೆ ನೌಕಾ ನೆಲೆಗೆ ಮಾಹಿತಿ ನೀಡಿದ್ದಾರೆ. ಬಳಿಕ ರಕ್ಷಣಾ ತಂಡಗಳು ದೋಣಿಗಳ ಮೂಲಕ ಘಟನಾ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿವೆ.
ಮೂರು ದಿನ ರಾಷ್ಟ್ರಧ್ವಜ ಅರ್ಧಕ್ಕೆ:
ಭೀಕರ ದುರಂತದ ಹಿನ್ನೆಲೆಯಲ್ಲಿ ನೈಜೀರಿಯಾ ಅಧ್ಯಕ್ಷ ಬೋಲಾ ಟಿನುಬು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತ ಸೈನಿಕರು ಹಾಗೂ ಸಿಬ್ಬಂದಿಗೆ ಗೌರವ ಸೂಚಿಸಲು ದೇಶಾದ್ಯಂತ ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ. ಈ ಅವಧಿಯಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸುವಂತೆ ಸೂಚಿಸಲಾಗಿದೆ.
ವಿಮಾನ ಪತನಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ತಾಂತ್ರಿಕ ದೋಷ ಅಥವಾ ಹವಾಮಾನ ವೈಪರೀತ್ಯದ ಸಾಧ್ಯತೆಯನ್ನು ಪರಿಗಣಿಸಲಾಗಿದ್ದು, ಘಟನೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಅಧ್ಯಕ್ಷರು ವಾಯುಪಡೆಗೆ ನಿರ್ದೇಶನ ನೀಡಿದ್ದಾರೆ.
ಮೃತರ ಗುರುತು ಪತ್ತೆ ಕಾರ್ಯ ನಡೆಯುತ್ತಿದ್ದು, ಕುಟುಂಬಸ್ಥರಿಗೆ ಅಧಿಕೃತ ಮಾಹಿತಿ ನೀಡಿದ ಬಳಿಕ ಮೃತರ ಹೆಸರುಗಳನ್ನು ಬಿಡುಗಡೆ ಮಾಡುವುದಾಗಿ ವಾಯುಪಡೆ ತಿಳಿಸಿದೆ.
ನೈಜೀರಿಯಾದಲ್ಲಿ ಸರಣಿ ವಾಯು ದುರಂತ:
ನೈಜೀರಿಯಾದಲ್ಲಿ ಸೇನಾ ವಿಮಾನಗಳು ಅಪಘಾತಕ್ಕೀಡಾಗುತ್ತಿರುವುದು ಇದೇ ಮೊದಲಲ್ಲ. 2021ರ ಮೇನಲ್ಲಿ ಕಡುನಾ ಬಳಿ ಸೇನಾ ವಿಮಾನ ಪತನಗೊಂಡು ಸೇನಾ ಮುಖ್ಯಸ್ಥ ಇಬ್ರಾಹಿಂ ಅಟ್ಟಹಿರು ಸೇರಿದಂತೆ 11 ಹಿರಿಯ ಅಧಿಕಾರಿಗಳು ಮೃತಪಟ್ಟಿದ್ದರು.
2015ರಲ್ಲೂ ಉತ್ತರ ನೈಜೀರಿಯಾದಲ್ಲಿ ಮಿಲಿಟರಿ ವಿಮಾನ ವಸತಿ ಕಟ್ಟಡಕ್ಕೆ ಅಪ್ಪಳಿಸಿ ಏಳು ಮಂದಿ ಮೃತಪಟ್ಟಿದ್ದರು. ಅದೇ ವರ್ಷ ಲಾಗೋಸ್ನಲ್ಲಿ ಬ್ರಿಸ್ಟೋ ಹೆಲಿಕಾಪ್ಟರ್ ಲಗೂನ್ಗೆ ಪತನಗೊಂಡು ಆರು ಮಂದಿ ಸಾವನ್ನಪ್ಪಿದ್ದರು. ಇದೀಗ ಮತ್ತೊಂದು ಭೀಕರ ದುರಂತ ಸಂಭವಿಸಿರುವುದು ನೈಜೀರಿಯಾದ ವಾಯುಯಾನ ಸುರಕ್ಷತೆ ಹಾಗೂ ವಿಮಾನ ನಿರ್ವಹಣೆ ಕುರಿತು ಚರ್ಚೆಗೆ ಕಾರಣವಾಗಿದೆ.



