ವಿಶ್ವ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಅಧಿಕೃತವಾಗಿ ರದ್ದಾಗಿದೆ.
ಅಕ್ಟೋಬರ್ 10ರಂದು ದುಬೈನಲ್ಲಿ ನಡೆಯಬೇಕಿದ್ದ ಈ ಪಂದ್ಯ ಇದೀಗ ನಡೆಯುವುದಿಲ್ಲ. ಇದರೊಂದಿಗೆ ಪಾಕಿಸ್ತಾನ ಚಾಂಪಿಯನ್ಸ್ ತಂಡವೂ ವರ್ಲ್ಡ್ ಚಾಂಪಿಯನ್‌ಷಿಪ್ ಆಫ್ ಲೆಜೆಂಡ್ಸ್ ಟೂರ್ನಿಯಿಂದ ಹೊರಬಿದ್ದಿದೆ.
ಪಂದ್ಯ ರದ್ದಾಗಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಟೂರ್ನಿ ಆಯೋಜಕರ ನಡುವಿನ ಭಿನ್ನಾಭಿಪ್ರಾಯವೇ ಪ್ರಮುಖ ಕಾರಣವಾಗಿದೆ. ಪಹಲ್ಗಾಮ್ ಉಗ್ರ ದಾಳಿಯ ಹಿನ್ನೆಲೆಯಲ್ಲಿ 2025ರಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಆಡಲು ನಿರಾಕರಿಸಿದ್ದ ವಿಚಾರವನ್ನು ಮುಂದಿಟ್ಟುಕೊಂಡು, ಈ ಬಾರಿ ಭಾರತೀಯ ಆಟಗಾರರು ಲಿಖಿತ ಕ್ಷಮೆಯಾಚಿಸಬೇಕು ಎಂದು ಪಿಸಿಬಿ ಒತ್ತಾಯಿಸಿತ್ತು.
ಅಲ್ಲದೆ, ಪಂದ್ಯದಲ್ಲಿ ಎರಡೂ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ಮಾಡಬೇಕು ಎಂಬ ಷರತ್ತನ್ನೂ ಪಿಸಿಬಿ ಮುಂದಿಟ್ಟಿತ್ತು. ಆದರೆ ಈ ಬೇಡಿಕೆಗಳನ್ನು ಟೂರ್ನಿ ಆಯೋಜಕರು ತಿರಸ್ಕರಿಸಿದ್ದಾರೆ. ರಾಜತಾಂತ್ರಿಕ ಹಾಗೂ ಭದ್ರತಾ ವಿಚಾರಗಳನ್ನು ಕ್ರೀಡಾಂಗಣದೊಳಗೆ ತರುವುದು ಸರಿಯಲ್ಲ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ.
ಆಯೋಜಕರು ಪಿಸಿಬಿಯ ಷರತ್ತುಗಳಿಗೆ ಒಪ್ಪದ ಹಿನ್ನೆಲೆಯಲ್ಲಿ, ಪಾಕಿಸ್ತಾನ ತಂಡದ ಆಟಗಾರರಿಗೆ ನಿರಾಕ್ಷೇಪಣಾ ಪತ್ರ ನೀಡಲು ಪಿಸಿಬಿ ನಿರಾಕರಿಸಿದೆ. ಪರಿಣಾಮವಾಗಿ ಶಾಹಿದ್ ಅಫ್ರಿದಿ ನೇತೃತ್ವದ ಪಾಕಿಸ್ತಾನ ಚಾಂಪಿಯನ್ಸ್ ತಂಡ ದುಬೈಗೆ ಪ್ರಯಾಣಿಸಲು ಸಾಧ್ಯವಾಗದೆ ಟೂರ್ನಿಯಿಂದ ಹೊರಬಿದ್ದಿದೆ.
ಆರು ತಂಡಗಳೊಂದಿಗೆ ಟೂರ್ನಿ ಮುಂದುವರಿಕೆ:
ಪಾಕಿಸ್ತಾನ ತಂಡ ಹೊರಬಿದ್ದರೂ ಟೂರ್ನಿಯನ್ನು ಸ್ಥಗಿತಗೊಳಿಸದಿರಲು ಆಯೋಜಕರು ನಿರ್ಧರಿಸಿದ್ದಾರೆ. ಉಳಿದ ಆರು ತಂಡಗಳಾದ ಭಾರತ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳೊಂದಿಗೆ ಪಂದ್ಯಾವಳಿ ಮುಂದುವರಿಯಲಿದೆ.
ಅಕ್ಟೋಬರ್ 10ರಂದು ಭಾರತ–ಪಾಕಿಸ್ತಾನ ಪಂದ್ಯ ನಡೆಯಬೇಕಿದ್ದ ದಿನ ಯಾವುದೇ ಪಂದ್ಯ ಇರುವುದಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ. ಹೀಗಾಗಿ ಬಹು ನಿರೀಕ್ಷಿತ ಭಾರತ–ಪಾಕಿಸ್ತಾನ ಕದನವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿದೆ.

