ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್ ಹಾಗೂ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರ ವಿವಾಹದ ದಿನಾಂಕ ನಿಗದಿಯಾಗಿದೆ ಎನ್ನಲಾಗಿದೆ. ಡಿಸೆಂಬರ್ 4ರಂದು ಲಕ್ನೋದ ರಾಮದಾ ಹೋಟೆಲ್ನಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ವಿವಾಹ ಸಮಾರಂಭದ ಸಿದ್ಧತೆಗಳು ಆರಂಭವಾಗಿದ್ದು, ಎರಡೂ ಕುಟುಂಬಗಳ ಆಪ್ತರು, ಸ್ನೇಹಿತರು ಸೇರಿದಂತೆ ಕ್ರಿಕೆಟ್ ಹಾಗೂ ರಾಜಕೀಯ ಕ್ಷೇತ್ರದ ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.
ರಿಂಕು ಸಿಂಗ್ ಹಾಗೂ ಪ್ರಿಯಾ ಸರೋಜ್ ಅವರು 2025ರ ಜೂನ್ 8ರಂದು ಲಕ್ನೋದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ಚಿತಾರ್ಥದ ಬಳಿಕ 2025ರ ನವೆಂಬರ್ನಲ್ಲಿ ವಾರಣಾಸಿಯ ತಾಜ್ ಹೋಟೆಲ್ನಲ್ಲಿ ವಿವಾಹ ನಡೆಯಲಿದೆ ಎಂಬ ವರದಿಗಳು ಹರಿದಾಡಿದ್ದವು. ಆದರೆ ರಿಂಕು ಸಿಂಗ್ ಅವರ ಕ್ರಿಕೆಟ್ ಬದ್ಧತೆಗಳ ಹಿನ್ನೆಲೆಯಲ್ಲಿ ವಿವಾಹವನ್ನು ಮುಂದೂಡಲಾಗಿತ್ತು.
ಬಳಿಕ 2026ರ ಫೆಬ್ರವರಿಯಲ್ಲಿ ಮದುವೆ ನಡೆಸಲು ಯೋಜಿಸಲಾಗಿತ್ತು ಎನ್ನಲಾಗಿತ್ತು. ಆದರೆ ಟಿ20 ವಿಶ್ವಕಪ್ ಸೇರಿದಂತೆ ಹಲವು ಪ್ರಮುಖ ಕ್ರಿಕೆಟ್ ಪಂದ್ಯಗಳು ಇದೇ ಅವಧಿಯಲ್ಲಿ ಇದ್ದ ಕಾರಣ ವಿವಾಹವನ್ನು ಮತ್ತೊಮ್ಮೆ ಮುಂದೂಡಲಾಗಿತ್ತು. ಇದೀಗ ಡಿಸೆಂಬರ್ 4ರಂದು ವಿವಾಹ ನೆರವೇರಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.
ಪ್ರಿಯಾ ಸರೋಜ್ ಅವರಿಗೆ ತಮ್ಮ ಸ್ವಗ್ರಾಮದ ವಾತಾವರಣದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮದುವೆಯಾಗಬೇಕೆಂಬ ಆಸೆ ಇತ್ತು ಎನ್ನಲಾಗಿದೆ. ಅವರ ಕುಟುಂಬದಲ್ಲಿ ಹಲವು ವಿವಾಹಗಳು ಗ್ರಾಮೀಣ ಶೈಲಿಯಲ್ಲಿ ನಡೆದಿರುವ ಹಿನ್ನೆಲೆಯಲ್ಲಿ, ಬಾಲ್ಯದಿಂದಲೂ ಮಂಟಪ, ಸಂಬಂಧಿಕರು ಹಾಗೂ ಇಡೀ ಕುಟುಂಬದ ಸಮ್ಮುಖದಲ್ಲಿ ಹಳ್ಳಿಯ ವಾತಾವರಣದಲ್ಲಿ ಮದುವೆಯಾಗುವ ಕಲ್ಪನೆ ಹೊಂದಿದ್ದರು ಎಂದು ವರದಿಯಾಗಿದೆ.
ಆದರೆ ರಿಂಕು ಸಿಂಗ್ ಹಾಗೂ ಪ್ರಿಯಾ ಸರೋಜ್ ಇಬ್ಬರೂ ಸಾರ್ವಜನಿಕವಾಗಿ ಹೆಚ್ಚು ಪರಿಚಿತರಾಗಿರುವುದರಿಂದ, ಹೆಚ್ಚಿನ ಅತಿಥಿಗಳಿಗೆ ಅನುಕೂಲವಾಗುವಂತೆ ವಿವಾಹ ಸಮಾರಂಭವನ್ನು ಲಕ್ನೋದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ಅವರ ನಿಶ್ಚಿತಾರ್ಥ ಸಮಾರಂಭವೂ ಲಕ್ನೋದಲ್ಲಿಯೇ ನಡೆದಿತ್ತು. ಆ ಕಾರ್ಯಕ್ರಮದಲ್ಲಿ ಕ್ರಿಕೆಟ್ ಹಾಗೂ ರಾಜಕೀಯ ಕ್ಷೇತ್ರದ ಹಲವು ಪ್ರಮುಖರು ಭಾಗವಹಿಸಿದ್ದರು. ಹೀಗಾಗಿ ವಿವಾಹಕ್ಕೂ ಲಕ್ನೋವನ್ನೇ ಆಯ್ಕೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಇದರ ಜೊತೆಗೆ ಪ್ರಿಯಾ ಸರೋಜ್ ಉತ್ತರ ಪ್ರದೇಶದ ರಾಜಕೀಯದಲ್ಲಿ ಸಕ್ರಿಯರಾಗಿರುವ ಹಿನ್ನೆಲೆಯಲ್ಲಿ ಲಕ್ನೋದಲ್ಲಿ ವಿವಾಹ ಆಯೋಜಿಸಿರುವುದು ಮತ್ತೊಂದು ಕಾರಣವಾಗಿರಬಹುದು ಎಂಬ ಚರ್ಚೆಯೂ ನಡೆಯುತ್ತಿದೆ. 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ವಿವಾಹ ಸಮಾರಂಭದತ್ತ ರಾಜಕೀಯ ವಲಯದ ಗಮನವೂ ಹರಿಯುವ ಸಾಧ್ಯತೆಯಿದೆ.
ಒಟ್ಟಿನಲ್ಲಿ ಹಲವು ಬಾರಿ ಮುಂದೂಡಿಕೆಯಾಗಿದ್ದ ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ಅವರ ವಿವಾಹ ಇದೀಗ ಡಿಸೆಂಬರ್ 4ರಂದು ಲಕ್ನೋದಲ್ಲಿ ನಡೆಯಲಿದೆ ಎಂಬ ವರದಿಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿವೆ.



