ಕ್ಯಾಲಿಫೋರ್ನಿಯಾ: ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರ ಜಾಗತಿಕ ಜನಪ್ರಿಯತೆ ಮತ್ತೊಮ್ಮೆ ಸಾಬೀತಾಗಿದೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆಯುತ್ತಿರುವ ವಿಶ್ವದ ಪ್ರತಿಷ್ಠಿತ ಸ್ಯಾನ್ ಡಿಯಾಗೋ ಕಾಮಿಕ್ ಕಾನ್ ಕಾರ್ಯಕ್ರಮದಲ್ಲಿ ಯಶ್ ಭಾಗವಹಿಸಿದ್ದು, ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಪಡೆದುಕೊಂಡಿದ್ದಾರೆ.
‘ರಾಮಾಯಣ’ ಚಿತ್ರದ ಪ್ರಚಾರದ ಭಾಗವಾಗಿ ಈ ಅಂತರರಾಷ್ಟ್ರೀಯ ವೇದಿಕೆಗೆ ಆಗಮಿಸಿದ ಯಶ್ ಅವರನ್ನು ನೋಡಲು ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ಯಶ್ ವೇದಿಕೆಗೆ ಬರುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.
ಅಭಿಮಾನಿಗಳು ತಮ್ಮ ಮೊಬೈಲ್ಗಳಲ್ಲಿ ಯಶ್ ಅವರ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿಯಲು ಮುಗಿಬಿದ್ದಿದ್ದು, ಅವರೊಂದಿಗೆ ಸೆಲ್ಫಿ ಪಡೆಯಲು ದೊಡ್ಡ ಸಾಲು ಕಂಡುಬಂತು. ‘ರಾಮಾಯಣ’ ಪ್ರಚಾರದ ನಡುವೆ ಯಶ್ ಅವರ ಮುಂಬರುವ ‘ಟಾಕ್ಸಿಕ್’ ಸಿನಿಮಾ ಕೂಡ ಅಭಿಮಾನಿಗಳ ಗಮನ ಸೆಳೆದಿದೆ.
ಚಿತ್ರದ ಜನಪ್ರಿಯ ಒನ್-ಲೈನರ್ ‘ಡ್ಯಾಡಿಸ್ ಹೋಂ’ ಕಾಮಿಕ್ ಕಾನ್ ವೇದಿಕೆಯ ಬಳಿಕ ಮತ್ತೆ ಟ್ರೆಂಡ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಭರ್ಜರಿ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.
‘ಕೆಜಿಎಫ್’ ಮೂಲಕ ವಿಶ್ವಾದ್ಯಂತ ಗುರುತಿಸಿಕೊಂಡಿರುವ ಯಶ್, ಇದೀಗ ‘ರಾಮಾಯಣ’ ಮತ್ತು ‘ಟಾಕ್ಸಿಕ್’ ಮೂಲಕ ಮತ್ತೊಂದು ಹಂತದ ಜಾಗತಿಕ ಪ್ರೇಕ್ಷಕರನ್ನು ತಲುಪಲು ಸಜ್ಜಾಗಿದ್ದಾರೆ.
‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ನಟಿಸುವುದರ ಜೊತೆಗೆ ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಗೀತು ಮೋಹನ್ದಾಸ್ ನಿರ್ದೇಶನದ ಈ ಚಿತ್ರ ಆಗಸ್ಟ್ 26ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಸ್ಯಾನ್ ಡಿಯಾಗೋ ಕಾಮಿಕ್ ಕಾನ್ ವೇದಿಕೆಯಲ್ಲಿ ಯಶ್ ಅವರ ಹಾಜರಾತಿ ಕನ್ನಡ ಚಿತ್ರರಂಗದ ಜಾಗತಿಕ ಬೆಳವಣಿಗೆಗೆ ಮತ್ತೊಂದು ದೊಡ್ಡ ಸಾಕ್ಷಿಯಾಗಿದೆ.



