HomeGadag Newsಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಕಾಲೇಜ್ ಮಂಜೂರು ಮಾಡಿ

ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಕಾಲೇಜ್ ಮಂಜೂರು ಮಾಡಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕು ಕೇಂದ್ರ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದರೂ ಗ್ರಾಮೀಣ ಭಾಗದ ಮಹಿಳಾ ವಿದ್ಯಾರ್ಥಿನಿಯರಿಗೆ ಪದವಿ ಶಿಕ್ಷಣ ಪಡೆಯಲು ಸೂಕ್ತ ಅವಕಾಶಗಳ ಕೊರತೆಯಿದೆ. ಮಹಿಳಾ ಸಬಲೀಕರಣದ ದೃಷ್ಟಿಯಿಂದ ಹಗರಿಬೊಮ್ಮನಹಳ್ಳಿ ತಾಲೂಕು ಕೇಂದ್ರದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಪ್ರಗತಿಪರ ನಾಗರಿಕರ ವೇದಿಕೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಿ, ಆಡಳಿತ ಸೌಧದ ಉಪ ತಹಸೀಲ್ದಾರ್ ಶಿವಕುಮಾರ್ ಅವರ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪತ್ರಕರ್ತ ಬುಡ್ಡಿ ಬಸವರಾಜ್ ಮಾತನಾಡಿ, ತಾಲೂಕು ಕೇಂದ್ರದಲ್ಲಿ ಏಳು ಪದವಿಪೂರ್ವ ಕಾಲೇಜುಗಳಿದ್ದು, ಪ್ರತಿವರ್ಷ ಸಾವಿರಾರು ವಿದ್ಯಾರ್ಥಿನಿಯರು ಪಿಯುಸಿ ಶಿಕ್ಷಣ ಪೂರ್ಣಗೊಳಿಸುತ್ತಾರೆ. ಆದರೆ ಪದವಿ ಶಿಕ್ಷಣ ಪಡೆಯಲು ಪ್ರತ್ಯೇಕ ಮಹಿಳಾ ಕಾಲೇಜು ಇಲ್ಲದಿರುವುದು ಈ ಭಾಗದ ಪ್ರಮುಖ ಕೊರತೆಯಾಗಿದೆ ಎಂದರು.

ಭೌಗೋಳಿಕವಾಗಿ ತಾಲೂಕು ಕೇಂದ್ರದಲ್ಲಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಸ್ಥಾಪಿಸುವ ಅಗತ್ಯವಿದೆ. ಗಂಗಾವತಿ ಭೀಮಪ್ಪ ಅವರು ಶಿಕ್ಷಣದ ಉದ್ದೇಶಕ್ಕಾಗಿ ಪಟ್ಟಣದಲ್ಲಿ ದಾನವಾಗಿ ನೀಡಿರುವ ಜಾಗದಲ್ಲಿ ವಿಶಾಲವಾದ ಸ್ಥಳಾವಕಾಶವಿದೆ. ಈ ಸ್ಥಳದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಕಾಲೇಜು ಸ್ಥಾಪಿಸಿದರೆ ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಧೈರ್ಯದಿಂದ ಕಾಲೇಜಿಗೆ ಕಳುಹಿಸಲು ಸಾಧ್ಯವಾಗುತ್ತದೆ. ಇದರಿಂದ ಪದವಿ ಶಿಕ್ಷಣ ಪಡೆಯುವ ಮಹಿಳೆಯರ ಸಂಖ್ಯೆ ಗಣನೀಯವಾಗಿ ಹೆಚ್ಚಲಿದೆ. ತಾಲೂಕಿನ 65ಕ್ಕೂ ಹೆಚ್ಚು ಗ್ರಾಮಗಳ ಗ್ರಾಮೀಣ ವಿದ್ಯಾರ್ಥಿನಿಯರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಹೇಳಿದರು.

ಪ್ರಗತಿಪರ ಸಂಘಟನೆಗಳ ಸಂಚಾಲಕ ಈ. ಕೃಷ್ಣಮೂರ್ತಿ ಮಾತನಾಡಿ, ಹಗರಿಬೊಮ್ಮನಹಳ್ಳಿ ತಾಲೂಕು ಇಡೀ ಜಿಲ್ಲೆಗೆ ಕೇಂದ್ರ ಸ್ಥಾನವಾಗಿರುವುದರಿಂದ ಇಲ್ಲಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಮಹಿಳಾ ವಿದ್ಯಾರ್ಥಿನಿಯರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮುಖಂಡ ಮುಟುಗನಹಳ್ಳಿ ಕೊಟ್ರೇಶ್ ಮಾತನಾಡಿ, ತಾಲೂಕು ಕೇಂದ್ರದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಯಾದರೆ ಕೊಟ್ಟೂರು, ಹಡಗಲಿ ಹಾಗೂ ಕೂಡ್ಲಿಗಿ ತಾಲೂಕುಗಳ ಕೆಲವು ಗ್ರಾಮಗಳ ವಿದ್ಯಾರ್ಥಿನಿಯರೂ ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ. ಇದು ಹೋರಾಟದ ಆರಂಭವಾಗಿದ್ದು, ಕಾಲೇಜು ಮಂಜೂರಾಗುವವರೆಗೆ ಹೋರಾಟ ನಿರಂತರವಾಗಿ ನಡೆಯಲಿದೆ. ಪಕ್ಷಾತೀತವಾಗಿ ಎಲ್ಲರೂ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ಟಿ. ರಾಘವೇಂದ್ರ, ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ದೊಡ್ಡಬಸಪ್ಪ, ಹಿಂದುಳಿದ ಜಾತಿಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಲಿಂಗರಾಜ ಯಾದವ್, ಪುರಸಭೆ ಸದಸ್ಯ ದೀಪಕ್ ಕಠಾರೆ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅನಿಲ್ ಕುಮಾರ್ ಜಾಣ, ಗಣೇಶ್ ಹಾವಲ್ದಾರ್, ಎಸ್.ಎಸ್. ಎತ್ತಿನಮನಿ ಸೇರಿದಂತೆ ಹಲವರು ಮಾತನಾಡಿದರು.

ಪ್ರತಿಭಟನೆಯಲ್ಲಿ ಕಿನ್ನಾಳ ಸುಭಾಸ್, ರುದ್ರೇಶ್, ಡಿಎಸ್‌ಎಸ್ ಸಂಚಾಲಕ ಕೆಚ್ಚನಬಂಡಿ ದುರ್ಗಪ್ಪ, ಬಸವರಾಜ್, ಗನಿಸಾಬ್, ಪ್ರಕಾಶ್, ಮಾದಿಗ ಮಹಾಸಭಾ ತಾಲೂಕು ಅಧ್ಯಕ್ಷ ಎಚ್. ಲೋಕಪ್ಪ, ಸೋಮು ಭಜಂತ್ರಿ, ಐನಹಳ್ಳಿ ಸೋಮಶೇಖರ್, ಜಮಾಲ್ ಸಾಬ್, ಸಂತೋಷ್, ಬ್ಯಾಲಾ ದೊಡ್ಡಬಸಪ್ಪ, ನಿಂಗಪ್ಪ, ಮಲ್ಲಿಕಾರ್ಜುನ, ಆನಂದ್ ಯಾದವ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಮಹಿಳೆಯರ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವುದು ಇಂದಿನ ಅಗತ್ಯ. ಹಗರಿಬೊಮ್ಮನಹಳ್ಳಿಯಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡುವವರೆಗೆ ಪಕ್ಷಾತೀತವಾಗಿ ಹೋರಾಟ ಮುಂದುವರಿಸುತ್ತೇವೆ.

— ಮುಟುಗನಹಳ್ಳಿ ಕೊಟ್ರೇಶ್, ಮುಖಂಡ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img