ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಮತ್ತೊಂದು ಹಿನ್ನಡೆಯಾಗಿದೆ. ಪ್ರಕರಣದ ಆರೋಪಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಮಾಡುವ ಪ್ರಕ್ರಿಯೆಗೆ 59ನೇ ಸಿಸಿಹೆಚ್ ಕೋರ್ಟ್ ಒಪ್ಪಿಗೆ ಸೂಚಿಸಿದೆ.
ಪ್ರದೋಷ್ ವಿರುದ್ಧ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಮಾಫಿ ಸಾಕ್ಷಿ ಪ್ರಕ್ರಿಯೆಯನ್ನು ತಡೆಹಿಡಿಯುವಂತೆ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಮಾಫಿ ಸಾಕ್ಷಿ ಪ್ರಕ್ರಿಯೆ ಮುಂದೂಡುವಂತೆ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದೆ.
ಈ ಮೂಲಕ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ನ್ಯಾಯಾಧೀಶೆ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಈ ಆದೇಶ ನೀಡಿದ್ದಾರೆ.
ಈ ಹಿಂದೆ ಹೈಕೋರ್ಟ್, ಮಾಫಿ ಸಾಕ್ಷಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೆಷನ್ ಕೋರ್ಟ್‌ಗೆ ನೀಡಿದ್ದ ಆದೇಶವನ್ನು ಮಾರ್ಪಡಿಸಿ ಹೊಸ ಆದೇಶ ಹೊರಡಿಸುವಂತೆ ಸೂಚಿಸಿತ್ತು. ಅದರಂತೆ ಇದೀಗ ಸೆಷನ್ ಕೋರ್ಟ್ ಹೊಸ ಆದೇಶ ಹೊರಡಿಸಿದ್ದು, ಶೀಘ್ರದಲ್ಲೇ ಮುಂದಿನ ಪ್ರಕ್ರಿಯೆಗೆ ದಿನಾಂಕ ನಿಗದಿಪಡಿಸುವ ಸಾಧ್ಯತೆಯಿದೆ.
ವಿಚಾರಣೆ ವೇಳೆ ನ್ಯಾಯಾಲಯವು ಮಾಫಿ ಸಾಕ್ಷಿಯಾಗಲು ಒಪ್ಪಿಗೆ ಇದೆಯೇ ಎಂದು ಪ್ರದೋಷ್ ಅವರನ್ನು ಪ್ರಶ್ನಿಸಿದ್ದು, ಇದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ.



