ಬೆಂಗಳೂರು: ಜ್ಯೋತಿಷ್ಯ ಹಾಗೂ ಚೌಡೇಶ್ವರಿ ಪೂಜೆ ಮಾಡುವ ನೆಪದಲ್ಲಿ ವೃದ್ಧೆಯೊಬ್ಬರಿಂದ ಸುಮಾರು ₹40 ಲಕ್ಷ ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬ್ಯಾಟರಾಯನಪುರದ 62 ವರ್ಷದ ಶಾಂತಮ್ಮ ವಂಚನೆಗೊಳಗಾದ ಮಹಿಳೆ. ವೆಂಕಟೇಶ್ ಎಂಬಾತ ವಂಚನೆ ನಡೆಸಿದ್ದಾನೆ. ಮೂಲತಃ ವಿಕ್ಟೋರಿಯಾ ಆಸ್ಪತ್ರೆಯ ಫುಟ್‌ಪಾತ್‌ನಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ವೆಂಕಟೇಶ್‌ಗೆ, ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬರುತ್ತಿದ್ದ ಶಾಂತಮ್ಮ ಅವರ ಪರಿಚಯವಾಗಿತ್ತು.
ಶಾಂತಮ್ಮ ಅವರ ಕೌಟುಂಬಿಕ ಹಾಗೂ ಆರೋಗ್ಯ ಸಮಸ್ಯೆಗಳನ್ನು ತಿಳಿದುಕೊಂಡ ವೆಂಕಟೇಶ್, ಮನೆಗೆ ಬಂದು ಚೌಡೇಶ್ವರಿ ಪೂಜೆ ಮಾಡಿದ್ದ. ಪೂಜೆಯ ಬಳಿಕ ಮಹಿಳೆಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು. ಬಳಿಕ ಮಗನ ಕುಡಿತ ಹಾಗೂ ಮಗಳ ಮದುವೆಯ ವಿಚಾರವಾಗಿಯೂ ಮಾತನಾಡಿದ್ದ.
ಮನೆಯಲ್ಲಿರುವ ಚಿನ್ನಾಭರಣಗಳಿಗೆ ಪೂಜೆ ಮಾಡಿದರೆ ದೋಷ ನಿವಾರಣೆಯಾಗುತ್ತದೆ ಎಂದು ಹೇಳಿ, ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆಯಂದು ಒಡವೆಗಳನ್ನು ಪಡೆದುಕೊಂಡಿದ್ದ. ಹೀಗೆ ಕಳೆದ ಒಂದು ವರ್ಷದಲ್ಲಿ ಹಂತ ಹಂತವಾಗಿ ಸುಮಾರು ₹40 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದ.
AI ವಿಡಿಯೋ ಮೂಲಕ ಅಪಘಾತದ ನಾಟಕ:
ಆಗಸ್ಟ್ 19ರಂದು ವರಮಹಾಲಕ್ಷ್ಮಿ ಹಬ್ಬದ ಪೂಜೆಗೆ ಚಿನ್ನಾಭರಣಗಳನ್ನು ವಾಪಸ್ ನೀಡುವಂತೆ ಶಾಂತಮ್ಮ ಕೇಳಿದ್ದರು. ಈ ವೇಳೆ ವೆಂಕಟೇಶ್ ತನಗೆ ಭೀಕರ ಅಪಘಾತವಾಗಿದ್ದು, ಆಸ್ಪತ್ರೆಗೆ ದಾಖಲಾಗಿರುವುದಾಗಿ ಬೇರೊಬ್ಬರಿಂದ ಕರೆ ಮಾಡಿಸಿದ್ದ.
ಜೊತೆಗೆ ತಲೆಗೆ ಗಂಭೀರ ಗಾಯವಾಗಿರುವಂತೆ ತೋರಿಸುವ AI ಮೂಲಕ ಸೃಷ್ಟಿಸಿದ ನಕಲಿ ವಿಡಿಯೋವನ್ನು ಶಾಂತಮ್ಮ ಅವರಿಗೆ ಕಳುಹಿಸಿ, ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ.
ವಿಡಿಯೋ ಬಗ್ಗೆ ಅನುಮಾನಗೊಂಡ ಶಾಂತಮ್ಮ, ಅದನ್ನು ತಮ್ಮ ಮಕ್ಕಳಿಗೆ ತೋರಿಸಿದ್ದಾರೆ. ಪರಿಶೀಲಿಸಿದಾಗ ಅದು AI ಮೂಲಕ ಸೃಷ್ಟಿಸಿದ ನಕಲಿ ವಿಡಿಯೋ ಎಂಬುದು ಗೊತ್ತಾಗಿದೆ.
ಬಳಿಕ ಶಾಂತಮ್ಮ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವೆಂಕಟೇಶ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.



