HomeGadag Newsಗುರುಗಳ ಆಶೀರ್ವಾದವೇ ಬದುಕಿನ ಬೆಳಕು..!

ಗುರುಗಳ ಆಶೀರ್ವಾದವೇ ಬದುಕಿನ ಬೆಳಕು..!

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರಗುಂದ: 23 ವರ್ಷಗಳ ಹಿಂದೆ ಒಂದೇ ತರಗತಿಯಲ್ಲಿ ಕುಳಿತು ಓದಿದ ವಿದ್ಯಾರ್ಥಿಗಳು ಮತ್ತೆ ಒಂದೇ ವೇದಿಕೆಯಲ್ಲಿ ಸೇರಿ ತಮ್ಮ ಗುರುಗಳಿಗೆ ಗೌರವ ನಮನ ಸಲ್ಲಿಸಿದ ಅಪರೂಪದ ಕ್ಷಣಕ್ಕೆ ಚಿಕ್ಕನರಗುಂದ ಸಾಕ್ಷಿಯಾಯಿತು. ನೆನಪುಗಳು, ನಗು, ಭಾವುಕ ಕ್ಷಣಗಳು, ಗುರುಭಕ್ತಿ ಹಾಗೂ ಸ್ನೇಹದ ಬಾಂಧವ್ಯಗಳಿಂದ ಕೂಡಿದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಎಲ್ಲರ ಮನಸ್ಸನ್ನು ತಟ್ಟಿತು.
ಚಿಕ್ಕನರಗುಂದದ ಡಿ.ಎಸ್. ಕೆಂಚನಗೌಡ್ರ ಪ್ರೌಢಶಾಲೆಯ 2002-2003ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಆಯೋಜಿಸಿದ್ದ “ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ” ಕಾರ್ಯಕ್ರಮಕ್ಕೆ ನರಗುಂದ ಪುಣ್ಯಾರಣ್ಯ ಪತ್ರಿವನಮಠದ ಷ.ಬ್ರ. ಡಾ. ಶ್ರೀ ಗುರುಸಿದ್ಧವೀರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಗುರು ಎಂದರೆ ಬೆಳಕು, ಜ್ಞಾನ ಹಾಗೂ ತೇಜಸ್ಸು. ಅದಕ್ಕಾಗಿಯೇ ಗುರುಗಳನ್ನು ಜ್ಞಾನಸೂರ್ಯ ಎಂದು ಕರೆಯುತ್ತಾರೆ. ಸೂರ್ಯೋದಯವಾದಾಗ ಕತ್ತಲೆ ಕರಗುವಂತೆ, ಗುರುವಿನ ಜ್ಞಾನದ ಅನುಗ್ರಹ ದೊರೆತಾಗ ಅಜ್ಞಾನ ದೂರವಾಗಿ ಸುಜ್ಞಾನ ಅರಳುತ್ತದೆ. ಗುರುಗಳು ಜ್ಞಾನದ ಸಂಜೀವಿನಿ ನೀಡುವ ಶಕ್ತಿಯಾಗಿದ್ದಾರೆ ಎಂದು ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನರಗುಂದ ಕಾಲೇಜಿನ ಉಪನ್ಯಾಸಕ ಎಸ್. ವ್ಹಿ. ದಂಡನಾಯ್ಕರ್, “ಎಲ್ಲರನ್ನು ಸಮದೃಷ್ಟಿಯಿಂದ ನೋಡಿ ಜ್ಞಾನದ ಧಾರೆಯನ್ನು ಹರಿಸುವ ಗುರುಗಳನ್ನು ಗೌರವಿಸುವುದು ನಮ್ಮ ಭವ್ಯ ಪರಂಪರೆ. ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವ ಈ ಅಪೂರ್ವ ಸಂಗಮ ನಿಜಕ್ಕೂ ಅರ್ಥಪೂರ್ಣ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಂದನಾರ್ಹ ಗುರು ಬಳಗಕ್ಕೆ ವಿದ್ಯಾರ್ಥಿಗಳು ಪುಷ್ಪಾರ್ಚನೆ ಸಲ್ಲಿಸಿ ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿದರು. ವರ್ಷಗಳ ಬಳಿಕ ತಮ್ಮ ವಿದ್ಯಾರ್ಥಿಗಳನ್ನು ಕಂಡ ಗುರುಗಳ ಕಣ್ಣುಗಳಲ್ಲಿ ಸಂತಸದ ಕಣ್ಣೀರು ಮಿಂಚಿತು.
ಗುರುಗಳಾದ ಎಚ್. ಏ. ಮುದಿಯಪ್ಪನವರ ಮಾತನಾಡಿ, “2002-2003ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಆಯೋಜಿಸಿರುವ ಈ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಿಂದ ತುಂಬಾ ಸಂತೋಷವಾಗಿದೆ. ಇದು ನಮ್ಮ ಪಾಲಿಗೆ ಐದನೇ ಗುರುವಂದನಾ ಕಾರ್ಯಕ್ರಮ. ಒಬ್ಬ ಶಿಕ್ಷಕನಿಗೆ ಇದಕ್ಕಿಂತ ದೊಡ್ಡ ಸಂತೋಷ ಇನ್ನೇನು ಬೇಕು? 23 ವರ್ಷಗಳ ಬಳಿಕ ಎಲ್ಲರನ್ನು ಮತ್ತೆ ನೋಡುವ ಅವಕಾಶ ಸಿಕ್ಕಿದೆ” ಎಂದು ಭಾವುಕರಾದರು.
“ಕವಿ ಹೇಳುವಂತೆ ‘ಸ್ವರ್ಗದೊಳಗೆ ಈ ಸ್ನೇಹ ದೊರೆಯುವುದೇನು? ಇಲ್ಲವಾಗಿರೆ ನಮಗೆ ಇಲ್ಲೇ ನೂರು ವರ್ಷಗಳಿರಲಿ’ ಎಂಬ ಮಾತು ಇಂದು ಸಾರ್ಥಕವಾಗಿದೆ. ಮನೆಯೇ ಮೊದಲ ಪಾಠಶಾಲೆ, ಜನನಿಯೇ ಮೊದಲ ಗುರು. ಮಕ್ಕಳನ್ನು ಮೊಬೈಲ್ ಹಾಗೂ ಟಿವಿಯಿಂದ ದೂರವಿಟ್ಟು ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರ ನೀಡಿ. ತಂದೆ-ತಾಯಿಗಳನ್ನು ಗೌರವಿಸಿ, ಬಂಧು ಬಳಗದೊಂದಿಗೆ ಉತ್ತಮ ಜೀವನ ನಡೆಸಿ” ಎಂದು ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್. ಎಸ್. ಕಂದಗಲ್ಲ ಮಾತನಾಡಿ, “ಗುರುವಿನ ಗುಲಾಮನಾಗುವ ತನಕ ದೊರೆಯುವುದನ್ನು ಮುಕ್ತಿ ಎಂಬ ನುಡಿಗಟ್ಟು ಇದೆ. ಜೀವನವನ್ನು ರೂಪಿಸುವ ಶಕ್ತಿ ಗುರುಗಳಲ್ಲಿದೆ. ವಿದ್ಯಾರ್ಥಿಗಳ ಈ ಸಮಾರಂಭ ಶಿಕ್ಷಕರು ಬಿತ್ತಿದ ನೈತಿಕ ಮೌಲ್ಯಗಳ ಪ್ರತಿಬಿಂಬ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರೇಣುಕಾ ಹೂಲಿ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಹಳೆಯ ವಿದ್ಯಾರ್ಥಿಗಳಾದ ಮಹಾಂತೇಶ ಹಲಗೌಡ್ರ, ನಿರ್ಮಲಾ ಹನಸಿ, ಗೀತಾ ಕಂಬಳಿ, ರವಿ ತಳವಾರ, ಹನಮಂತ ಮೇಟಿ ಶಾಲಾ ದಿನಗಳ ಅನುಭವಗಳನ್ನು ಹಂಚಿಕೊಂಡು ಭಾವನಾತ್ಮಕ ಕ್ಷಣಗಳನ್ನು ನೆನಪಿಸಿಕೊಂಡರು.
ಮುತ್ತು ರಾಯರಡ್ಡಿ ಸ್ವಾಗತಿಸಿದರು. ಪ್ರಕಾಶ ಗುಡಸಲಮನಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಕಾಂತ ಚಲವಾದಿ ವಂದಿಸಿದರು.
ಸಭೆಯಲ್ಲಿ ಎಲ್ಲಾ ಹಳೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕುಟುಂಬ ಸಮೇತರಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.
 “23 ವರ್ಷಗಳ ಬಳಿಕ ಮತ್ತೆ ಒಂದೇ ವೇದಿಕೆಯಲ್ಲಿ ಸೇರಿರುವ ನಮ್ಮ ಸ್ನೇಹಿತರು ಮತ್ತು ಗುರುಗಳನ್ನು ನೋಡುವುದು ಬದುಕಿನ ಅತ್ಯಂತ ಅಮೂಲ್ಯ ಕ್ಷಣ. ಗುರುಗಳ ಆಶೀರ್ವಾದವೇ ನಮ್ಮ ಜೀವನದ ನಿಜವಾದ ಸಂಪತ್ತು.”
ಮುತ್ತು ರಾಯರಡ್ಡಿ
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ
 “ಗುರುಗಳು ಕಲಿಸಿದ ಪಾಠವೇ ಇಂದು ನಮ್ಮ ಬದುಕಿನ ದಾರಿದೀಪವಾಗಿದೆ. ವರ್ಷಗಳು ಕಳೆದರೂ ಶಾಲೆಯ ನೆನಪು ಮತ್ತು ಗುರುಗಳ ಋಣವನ್ನು ಮರೆಯಲು ಸಾಧ್ಯವಿಲ್ಲ.”
ಎಚ್. ಏ. ಮುದಿಯಪ್ಪನವರ
ಶಿಕ್ಷಕರು

Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!