ಬೆಂಗಳೂರು: ಕಾಕ್ರೋಚ್ ಜನತಾ ಪಾರ್ಟಿ (CJP) ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಆ ಸಂಘಟನೆ ದೇಶದ್ರೋಹಿ ಸಂಘಟನೆಯಾಗಿದ್ದು, ಅದರ ಮುಖ್ಯಸ್ಥ ಅಭಿಜಿತ್ ದೀಪ್ಕೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್. ಅಶೋಕ್, ಕಾಕ್ರೋಚ್ ಜನತಾ ಪಾರ್ಟಿ ನಡೆಸಿದ ಪ್ರತಿಭಟನೆಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬೆಂಬಲ ನೀಡಿರುವುದನ್ನು ಟೀಕಿಸಿದರು.
“ರಾಹುಲ್ ಗಾಂಧಿ ಜಿರಳೆ ಪ್ರತಿಭಟನೆಗೆ ಹೋಗುತ್ತಾರೆ. ಆದರೆ ರಾಜ್ಯದ ರೈತರ ಸಮಸ್ಯೆ, ಬರ ಪರಿಸ್ಥಿತಿ ಹಾಗೂ ಜನರ ಸಂಕಷ್ಟಗಳ ಬಗ್ಗೆ ಮಾತನಾಡಲು ಅವರಿಗೆ ಸಮಯವಿಲ್ಲ” ಎಂದು ಅಶೋಕ್ ಲೇವಡಿ ಮಾಡಿದರು.
ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಕೃಷಿ ಸಚಿವರು ಹಾಗೂ ತೋಟಗಾರಿಕೆ ಸಚಿವರಿಲ್ಲ. ಬರ ಪರಿಸ್ಥಿತಿ ಕುರಿತು ಸಮೀಕ್ಷೆ ನಡೆಸುವವರು ಯಾರು? ಅಧಿಕಾರಿಗಳನ್ನು ನಂಬುವ ಪರಿಸ್ಥಿತಿ ಇದೆಯೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದ್ದರೂ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಒತ್ತಾಯಿಸುತ್ತಿದೆ. ಆದರೆ ಮೊದಲು ರಾಜ್ಯ ಸರ್ಕಾರವೇ ಬರವನ್ನು ವಿಪತ್ತು ಎಂದು ಘೋಷಿಸಿಲ್ಲ. ಕೇಂದ್ರ ಸರ್ಕಾರ ಹೇಗೆ ಕ್ರಮ ಕೈಗೊಳ್ಳುತ್ತದೆ ಎಂದು ಅಶೋಕ್ ಹೇಳಿದರು.
“ರೋಮ್ ಹೊತ್ತಿ ಉರಿಯುತ್ತಿದ್ದಾಗ ಯಾರೋ ಪಿಟೀಲು ಬಾರಿಸುತ್ತಿದ್ದಂತೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಕುಳಿತಿದ್ದಾರೆ. ಈಗ ಎಲ್ಲರಿಗೂ ದೆಹಲಿ ರಾಜಕೀಯವೇ ಬೇಕಾಗಿದೆ” ಎಂದು ಟೀಕಿಸಿದರು.
ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ವಾಗ್ದಾಳಿ ನಡೆಸಿದ ಅಶೋಕ್, “ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ಅವರು ಮೊದಲು ಕಲಬುರಗಿಯಿಂದ ಜನರು ಗುಳೆ ಹೋಗುತ್ತಿರುವುದಕ್ಕೆ ಲೆಕ್ಕ ನೀಡಲಿ” ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಜನರು ಉದ್ಯೋಗಕ್ಕಾಗಿ ಗುಳೆ ಹೋಗುತ್ತಿದ್ದಾರೆ, ತಾಂಡಾಗಳು ಖಾಲಿಯಾಗುತ್ತಿವೆ. ಈ ಸಮಸ್ಯೆಗಳ ಬಗ್ಗೆ ಸರ್ಕಾರ ಮೊದಲು ಗಮನ ಹರಿಸಬೇಕು ಎಂದು ಆರ್. ಅಶೋಕ್ ಒತ್ತಾಯಿಸಿದರು.



