ವಾಷಿಂಗ್ಟನ್: ಭಾರತದ ಪ್ರಮುಖ ಉದ್ಯಮಿ ಹಾಗೂ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿಗೆ ಅಮೆರಿಕದಿಂದ ಮಹತ್ವದ ಪರಿಹಾರ ಸಿಕ್ಕಿದೆ.
ಇವರ ವಿರುದ್ಧ ಇದ್ದ ಎಲ್ಲಾ ಕ್ರಿಮಿನಲ್ ವಂಚನೆ ಮತ್ತು ಲಂಚದ ಆರೋಪಗಳನ್ನು ಅಮೆರಿಕದ ನ್ಯಾಯಾಂಗ ಇಲಾಖೆ ಶಾಶ್ವತವಾಗಿ ಕೈಬಿಟ್ಟಿದೆ ಎಂದು ವರದಿಯಾಗಿದೆ.
ನ್ಯೂಯಾರ್ಕ್ನಲ್ಲಿ ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ವಿರುದ್ಧ ಹೈಪ್ರೊಫೈಲ್ ಸೆಕ್ಯೂರಿಟೀಸ್ ಮತ್ತು ವೈರ್ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಆದರೆ ಈ ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಟರ್ಗಳಿಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೈಬಿಡಲಾಗಿದೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ತಿಳಿಸಿದೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ನ ಷೇರುಗಳು ಸಕಾರಾತ್ಮಕ ಚಲನೆಯನ್ನು ತೋರಿಸುತ್ತಿವೆ ಎಂದು ತಿಳಿದುಬಂದಿದೆ.
ಇದೇ ವೇಳೆ, ಪ್ರಕರಣ ಇತ್ಯರ್ಥವಾದ ನಂತರ ಅಮೆರಿಕದ ಆರ್ಥಿಕತೆಯಲ್ಲಿ ಸುಮಾರು 10 ಬಿಲಿಯನ್ ಡಾಲರ್ (ಅಂದಾಜು 83,000 ಕೋಟಿ ರೂ.) ಹೂಡಿಕೆ ಮಾಡುವುದಾಗಿ ಹಾಗೂ ಸುಮಾರು 15,000 ಹೊಸ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಅದಾನಿ ಸಮೂಹ ಭರವಸೆ ನೀಡಿದೆ.
ಈ ಪ್ರಕರಣದ ಅಂತ್ಯವು ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಹೂಡಿಕೆ ವಲಯದಲ್ಲೂ ಗಮನ ಸೆಳೆದಿದ್ದು, ಮುಂದಿನ ಬೆಳವಣಿಗೆಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.



