ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಣ ಪ್ರೇಮಿ, ತ್ಯಾಗಜೀವಿ ಬಿ.ಜಿ. ಅಣ್ಣಿಗೇರಿ ಗುರುಗಳು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅನನ್ಯವಾಗಿದ್ದು, ಅವರು ಆರಂಭಿಸಿದ ಗುರುಕುಲ ಮಾದರಿಯ ಆಶ್ರಮದಲ್ಲಿ ಇಂದಿಗೂ ಅನುಭವಿ ಶಿಕ್ಷಕರಿಂದ ನಿರಂತರ ‘ಅಕ್ಷರ ದಾಸೋಹ’ ನಡೆಯುತ್ತಿರುವುದು ಅಭಿನಂದನೀಯ ಎಂದು ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವ್ಹಿ.ವ್ಹಿ. ನಡುವಿನಮನಿ ಹೇಳಿದರು.
ಗದಗ ತಾಲೂಕಿನ ಹಾತಲಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಶ್ರೀ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊದಲ ಐದು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಅಭಿನಂದನಾ ಪತ್ರ, ಕಾಲೇಜು ಬ್ಯಾಗ್ ಹಾಗೂ ಸಿಹಿ ವಿತರಿಸಿ ಅವರು ಮಾತನಾಡಿದರು.
ಶಿಕ್ಷಕರಾಗಿ ಹಾಗೂ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದ ಅಣ್ಣಿಗೇರಿ ಗುರುಗಳು ತಮ್ಮ ವಾಸದ ಕೊಠಡಿಯಲ್ಲಿ ಕೆಲ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳುವ ಮೂಲಕ ಆರಂಭಿಸಿದ ಶಿಕ್ಷಣ ಸೇವೆ, ನಂತರ ಗುರುಕುಲ ಮಾದರಿಯ ಆಶ್ರಮವಾಗಿ ಬೆಳೆದು ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ. ಅವರ ಶಿಷ್ಯರು ಇಂದಿಗೂ ಆ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಶಿವಾನಂದ ಪೂಜಾರ ವಹಿಸಿದ್ದರು.
ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಮೊದಲ ಐದು ಸ್ಥಾನ ಪಡೆದ ಸತೀಶ ಪೂಜಾರ, ಯಶೋಧಾ ಆಲೂರ, ರಶ್ಮಿ ಬಾರಕೇರ, ಧನರಾಜ ಬೆಂತೂರ ಹಾಗೂ ರೇಣುಕಾ ಕುರುಬರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಶಂಕರ ಹಡಗಲಿ, ಪ್ರತಿಷ್ಠಾನದ ಕಾರ್ಯದರ್ಶಿ ಸುಭಾಷಚಂದ್ರ ಬೆಟ್ಟದೂರ, ಶಿವಾನಂದ ಕತ್ತಿ, ನೇಹಾ ಖಟವಟೆ, ಜ್ಯೋತಿ ವಡಗೇರಿ, ಮಂಜುನಾಥ ಕುರಬರ ಉಪಸ್ಥಿತರಿದ್ದರು.
ಸತೀಶ ಮೇಲ್ಮನಿ ಪ್ರಾರ್ಥಿಸಿದರು. ಸುಮಿತ್ರಾ ಮೇತ್ರಿ ಸ್ವಾಗತಿಸಿದರು. ಲಿಂಗನಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ವಿಜಯಲಕ್ಷ್ಮಿ ರಾಠೋಡ ವಂದಿಸಿದರು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಸದಸ್ಯರು, ಗ್ರಾಮದ ಗಣ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
“ಬಿ.ಜಿ. ಅಣ್ಣಿಗೇರಿ ಗುರುಗಳು ಆರಂಭಿಸಿದ ಗುರುಕುಲ ಪರಂಪರೆ ಇಂದಿಗೂ ಅಕ್ಷರ ದಾಸೋಹದ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬದುಕು ರೂಪಿಸುತ್ತಿದೆ. ಇಂತಹ ಶಿಕ್ಷಣ ಸೇವೆ ಸಮಾಜಕ್ಕೆ ಮಾದರಿಯಾಗಿದೆ.”
– ವ್ಹಿ.ವ್ಹಿ. ನಡುವಿನಮನಿ, ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ



