ಬೆಂಗಳೂರು: ನಗರದ ಕ್ರೆಸೆಂಟ್ ರಸ್ತೆಯಲ್ಲಿ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮರವೊಂದು ಬುಡಸಮೇತ ಉರುಳಿಬಿದ್ದಿದೆ.
ಕ್ರೆಸೆಂಟ್ ಹೋಟೆಲ್ ಮುಂಭಾಗದಲ್ಲಿ ಈ ಘಟನೆ ನಡೆದಿದೆ.
ಪೆಟ್ಟಿಗೆ ಅಂಗಡಿಯ ಪಕ್ಕದಲ್ಲೇ ಮರ ಬಿದ್ದಿದ್ದು, ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಮರ ಅಂಗಡಿಯ ಮೇಲೆ ಅಥವಾ ಪಾದಚಾರಿಗಳು, ಬೈಕ್ ಸವಾರರ ಮೇಲೆ ಬಿದ್ದಿದ್ದರೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆಯಿತ್ತು.
ಮರ ಉರುಳುತ್ತಿದ್ದಂತೆ ಕ್ಯಾಂಟರ್ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಮರ ರಸ್ತೆಗೆ ಅಡ್ಡಲಾಗಿ ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆಯಿದೆ. ಮರ ತೆರವುಗೊಳಿಸಲು ಜಿಬಿಎ ಸಿಬ್ಬಂದಿ ಸ್ಥಳಕ್ಕೆ ಆಗಮಿಸಬೇಕಿದೆ.
ಇನ್ನು, ರೇಸ್ ಕೋರ್ಸ್ ರಸ್ತೆ ಬಂದ್ ಆಗಿರುವ ಹಿನ್ನೆಲೆಯಲ್ಲಿ ಕ್ಯಾಂಟರ್ ಚಾಲಕ ಕ್ರೆಸೆಂಟ್ ರಸ್ತೆಯ ಮೂಲಕ ವಾಹನ ಚಲಾಯಿಸಿದ್ದ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



