HomeBengaluru News8 ತಿಂಗಳ ಬಳಿಕ ನಾಪತ್ತೆಯಾಗಿದ್ದ ಬೆಂಗಳೂರಿನ ಇಬ್ಬರು ಪಿಯು ವಿದ್ಯಾರ್ಥಿನಿಯರು ಪತ್ತೆ: ಒಬ್ಬಳು ಗರ್ಭಿಣಿ

8 ತಿಂಗಳ ಬಳಿಕ ನಾಪತ್ತೆಯಾಗಿದ್ದ ಬೆಂಗಳೂರಿನ ಇಬ್ಬರು ಪಿಯು ವಿದ್ಯಾರ್ಥಿನಿಯರು ಪತ್ತೆ: ಒಬ್ಬಳು ಗರ್ಭಿಣಿ

For Dai;y Updates Join Our whatsapp Group

ಬೆಂಗಳೂರು: ಎಂಟು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರಣ್ಯಪುರ ಮೂಲದ ಇಬ್ಬರು ಪಿಯು ವಿದ್ಯಾರ್ಥಿನಿಯರನ್ನು ಸಿಐಡಿ ಅಧಿಕಾರಿಗಳು ಕೊನೆಗೂ ಪತ್ತೆಹಚ್ಚಿದ್ದಾರೆ. ಜನವರಿ 31ರಂದು ಇಬ್ಬರೂ ನಾಪತ್ತೆಯಾಗಿದ್ದು, ಅವರಲ್ಲಿ ಒಬ್ಬರು ದ್ವಿತೀಯ ಪಿಯುಸಿ ಹಾಗೂ ಮತ್ತೊಬ್ಬರು ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಸದ್ಯ ಇಬ್ಬರೂ ಪತ್ತೆಯಾಗಿದ್ದು, ಅವರಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮದುವೆಯಾಗಿದ್ದು ಗರ್ಭಿಣಿಯಾಗಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ವಿದ್ಯಾರ್ಥಿನಿಯರು ನಾಪತ್ತೆಯಾದ ಬಳಿಕ ಪೋಷಕರು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಿಸಿದ್ದರು. ಪೊಲೀಸರು ಹುಡುಕಾಟ ನಡೆಸಿದರೂ ಆರಂಭದಲ್ಲಿ ಇಬ್ಬರ ಸುಳಿವು ಸಿಕ್ಕಿರಲಿಲ್ಲ. ಬಳಿಕ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ವೇಳೆ ಇಬ್ಬರು ವಿದ್ಯಾರ್ಥಿನಿಯರು ಮಗುವಿನೊಂದಿಗೆ ಆಟವಾಡುತ್ತಿರುವುದು ಕಂಡುಬಂದಿತ್ತು. ಆ ಸಂದರ್ಭದಲ್ಲಿ ಮಗುವಿನ ತಾಯಿ ಹಾಗೂ ಇಬ್ಬರು ವಿದ್ಯಾರ್ಥಿನಿಯರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದರು. ಇದಾದ ಬಳಿಕ ವಿದ್ಯಾರ್ಥಿನಿಯರ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ.

ತಮ್ಮ ಮಕ್ಕಳ ಪತ್ತೆಯಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹೈಕೋರ್ಟ್ ಮೊರೆ ಹೋಗಿದ್ದರು. ಸುಮಾರು ಐದಾರು ತಿಂಗಳ ಬಳಿಕ ಪ್ರಕರಣವನ್ನು ಹೈಕೋರ್ಟ್ ಸಿಐಡಿಗೆ ವರ್ಗಾವಣೆ ಮಾಡಿತ್ತು. ಕಳೆದ ಮೂರು ತಿಂಗಳಿಂದ ಸಿಐಡಿ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ವಿದ್ಯಾರ್ಥಿನಿಯರ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು.

ಈ ನಡುವೆ ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಸಿಮ್ ಕಾರ್ಡ್ ಖರೀದಿಸಲು ತೆರಳಿದ್ದಳು. ಈ ವೇಳೆ ಆಧಾರ್ ಕಾರ್ಡ್ ಸಂಖ್ಯೆ ಬಳಸಿದಾಗ ಸರ್ವಿಸ್ ಪ್ರೊವೈಡರ್ ಮೂಲಕ ಸಿಐಡಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ. ಈ ಸುಳಿವಿನ ಆಧಾರದ ಮೇಲೆ ತನಿಖೆ ಮುಂದುವರಿಸಿದ ಅಧಿಕಾರಿಗಳು ಇಬ್ಬರು ವಿದ್ಯಾರ್ಥಿನಿಯರನ್ನು ಪತ್ತೆಹಚ್ಚಿದ್ದಾರೆ.

ವಿಚಾರಣೆ ವೇಳೆ ಇಬ್ಬರು ವಿದ್ಯಾರ್ಥಿನಿಯರಿಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಕನಕಪುರ ತಾಲೂಕಿನ ಯುವಕನೊಬ್ಬನ ಪರಿಚಯವಾಗಿರುವುದು ತಿಳಿದುಬಂದಿದೆ. ಕುಟುಂಬದಲ್ಲಿ ಸಮಸ್ಯೆಗಳಿದ್ದ ಹಿನ್ನೆಲೆಯಲ್ಲಿ ದೊಡ್ಡ ವಿದ್ಯಾರ್ಥಿನಿ ತನ್ನ ತಂಗಿ, ತಂದೆ-ತಾಯಿ ಹಾಗೂ ಕುಟುಂಬಸ್ಥರು ಯಾರೂ ಇಲ್ಲ ಎಂದು ಯುವಕನಿಗೆ ಸುಳ್ಳು ಹೇಳಿದ್ದಳು ಎನ್ನಲಾಗಿದೆ. ಬಳಿಕ ಇಬ್ಬರೂ ಆ ಯುವಕನೊಂದಿಗೆ ತೆರಳಿದ್ದರು.

ನಂತರ ದೊಡ್ಡ ವಿದ್ಯಾರ್ಥಿನಿ ಆ ಯುವಕನನ್ನು ಮದುವೆಯಾಗಿದ್ದು, ಇಬ್ಬರೂ ಒಟ್ಟಿಗೆ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಸದ್ಯ ಆಕೆ ಗರ್ಭಿಣಿಯಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಇಬ್ಬರು ವಿದ್ಯಾರ್ಥಿನಿಯರನ್ನು ಪೊಲೀಸರು ಇಂದು ಹೈಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img