ಬೆಂಗಳೂರು: ಹಿಂದಿಯನ್ನು ‘ರಾಷ್ಟ್ರೀಯ ಭಾಷೆ’ ಎಂದು ಉಲ್ಲೇಖಿಸಿದ್ದ ನಟ ಶಿವರಾಜ್‌ಕುಮಾರ್ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಅವರು ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿದ್ದಾರೆ. ‘ಒರಿಜಿನಲ್ ಮಾನ್‌ಸ್ಟರ್’ ಚಿತ್ರದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮದ ವೇಳೆ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಿವಣ್ಣ, ಸಂವಿಧಾನಾತ್ಮಕ ಅರ್ಥದಲ್ಲಿ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಹೇಳಿಲ್ಲ ಎಂದು ತಿಳಿಸಿದ್ದಾರೆ.
ಚಿತ್ರ ಹಿಂದಿಯಲ್ಲೂ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಿಂದಿ ಡಬ್ಬಿಂಗ್ ಕುರಿತು ಪತ್ರಿಕಾಗೋಷ್ಠಿಯಲ್ಲಿ ಶಿವರಾಜ್‌ಕುಮಾರ್ ಅವರಿಗೆ ಪ್ರಶ್ನೆ ಕೇಳಲಾಗಿತ್ತು. ಈ ವೇಳೆ ಕಾಲೇಜು ದಿನಗಳಲ್ಲಿ ಹಿಂದಿ ತಮ್ಮ ಎರಡನೇ ಭಾಷೆಯಾಗಿತ್ತು. ಹಿಂದಿ ಸುಲಭವಾದ ಭಾಷೆ ಹಾಗೂ ನಮ್ಮ ರಾಷ್ಟ್ರೀಯ ಭಾಷೆ ಎಂದು ಅವರು ಹೇಳಿದ್ದರು. ಈ ಮಾತಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕನ್ನಡಿಗರು ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಇದೀಗ ತಮ್ಮ ಹೇಳಿಕೆಯ ಕುರಿತು ವಿವರಣೆ ನೀಡಿರುವ ಶಿವರಾಜ್‌ಕುಮಾರ್, ದೇಶದಾದ್ಯಂತ ವ್ಯಾಪಕವಾಗಿ ಮಾತನಾಡಲ್ಪಡುವ ಮತ್ತು ಜನಪ್ರಿಯವಾಗಿರುವ ಭಾಷೆ ಎಂಬ ಸರಳ ಅರ್ಥದಲ್ಲಿ ಆ ಪದ ಬಳಸಿದ್ದಾಗಿ ಹೇಳಿದ್ದಾರೆ. ರಾಷ್ಟ್ರಭಾಷೆ ಎಂಬುದನ್ನು ಸಂವಿಧಾನಾತ್ಮಕ ಅಥವಾ ತಾಂತ್ರಿಕ ಅರ್ಥದಲ್ಲಿ ಬಳಸಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕನ್ನಡ ನಾಡು, ನುಡಿ ಹಾಗೂ ಭಾಷೆಯ ಬಗ್ಗೆ ತಮ್ಮ ಗೌರವ ಮತ್ತು ಪ್ರೀತಿ ಸದಾ ಮೊದಲ ಸ್ಥಾನದಲ್ಲಿರುತ್ತದೆ ಎಂದು ಶಿವಣ್ಣ ಹೇಳಿದ್ದಾರೆ. ಸಿನಿಮಾ ಪ್ರಚಾರದ ವೇಳೆ ಹಿಂದಿ ಸಂಭಾಷಣೆ ಹಾಗೂ ಡಬ್ಬಿಂಗ್ ಕುರಿತು ಕೇಳಲಾದ ಪ್ರಶ್ನೆಗೆ ತಕ್ಷಣ ಸರಳವಾಗಿ ಉತ್ತರಿಸುವ ಸಂದರ್ಭದಲ್ಲಿ ಈ ಮಾತು ಬಂದಿತ್ತೇ ಹೊರತು ಯಾವುದೇ ಭಾಷಾ ಹೇರಿಕೆಯನ್ನು ಬೆಂಬಲಿಸುವ ಉದ್ದೇಶ ಇರಲಿಲ್ಲ ಎಂದು ತಿಳಿಸಿದ್ದಾರೆ.
ಹೇಳಿಕೆಯಿಂದ ಉಂಟಾದ ಗೊಂದಲಕ್ಕೆ ಕ್ಷಮೆಯಾಚಿಸಿರುವ ಶಿವರಾಜ್‌ಕುಮಾರ್, ತಮ್ಮ ಮಾತನ್ನು ತಿದ್ದಿಕೊಂಡಿದ್ದಾರೆ. ಅವರ ಸ್ಪಷ್ಟನೆಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.



