ಬೆಂಗಳೂರು: ನಟ ಕಿರಣ್ ರಾಜ್ ಅವರಿಗೆ ಸಿಂಹ ದಾಳಿ ಮಾಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ ವಿಡಿಯೋ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಈ ಸುದ್ದಿಯ ಹಿಂದಿನ ಅಸಲಿಯತ್ತನ್ನು ಕಿರಣ್ ರಾಜ್ ಅವರೇ ಬಹಿರಂಗಪಡಿಸಿದ್ದಾರೆ. ಮುಂದಿನ ಸಿನಿಮಾಕ್ಕಾಗಿ ಸಿಂಹದೊಂದಿಗೆ ತರಬೇತಿ ಪಡೆಯುತ್ತಿರುವ ವೇಳೆ ನಡೆದ ಘಟನೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಿರಣ್ ರಾಜ್ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಪ್ರತಿಯೊಂದು ಪಾತ್ರಕ್ಕೂ ತಯಾರಿ ನಡೆಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಸದ್ಯ ಮುಂದಿನ ಚಿತ್ರಕ್ಕಾಗಿ ಸಿಂಹದೊಂದಿಗೆ ತರಬೇತಿ ಪಡೆಯುತ್ತಿದ್ದಾರೆ. ಈ ಸಂದರ್ಭದ ವಿಡಿಯೋವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು.
ವಿಡಿಯೋದಲ್ಲಿ ಕಿರಣ್ ರಾಜ್ ಸಿಂಹದ ಬಳಿ ಬರುತ್ತಿದ್ದಂತೆ ಅದು ಅವರತ್ತ ಮುನ್ನುಗ್ಗುತ್ತದೆ. ಸಿಂಹ ದಾಳಿ ಮಾಡಲು ಬರುತ್ತಿರುವಂತೆ ಕಾಣುವ ದೃಶ್ಯದಲ್ಲಿ, ಅಲ್ಲಿದ್ದ ವ್ಯಕ್ತಿಯೊಬ್ಬರು ತಕ್ಷಣ ಮಧ್ಯಪ್ರವೇಶಿಸಿ ನಟನನ್ನು ದೂರ ಸರಿಸುತ್ತಾರೆ. ಇದನ್ನೇ ಕೆಲವರು ಸಿಂಹದ ದಾಳಿ ಎಂದು ಬಿಂಬಿಸಿ ಸುದ್ದಿ ಹರಡಿದ್ದರು.
ಆದರೆ ಇದು ಯಾವುದೇ ಗಂಭೀರ ದಾಳಿ ಅಲ್ಲ ಎಂದು ಕಿರಣ್ ರಾಜ್ ತಿಳಿಸಿದ್ದಾರೆ. ತರಬೇತಿಯ ಮೊದಲ ದಿನ ನಡೆದ ಫ್ರೆಂಡ್ಲಿ ಅಟ್ಯಾಕ್ ಇದಾಗಿದ್ದು, ತಾವು ಸಂಪೂರ್ಣ ಆರೋಗ್ಯವಾಗಿರುವುದಾಗಿ ಹೇಳಿದ್ದಾರೆ. ತಪ್ಪು ಸುದ್ದಿಗಳನ್ನು ಹಬ್ಬಿಸದಂತೆ ಮನವಿ ಮಾಡಿರುವ ಅವರು, ತರಬೇತಿ ಮತ್ತು ಸಿನಿಮಾಗಾಗಿ ತಾವು ಮಾಡುತ್ತಿರುವ ಸಿದ್ಧತೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ವೈರಲ್ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಸಿನಿಮಾಗಾಗಿ ಕಿರಣ್ ರಾಜ್ ಮಾಡುತ್ತಿರುವ ಸಿದ್ಧತೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅವರು ‘ಜಾಕಿ 42’ ಸಿನಿಮಾದಲ್ಲೂ ಅಭಿನಯಿಸುತ್ತಿದ್ದು, ಕುದುರೆ ಓಡಿಸುವ ಜಾಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಟ್ರೇಲರ್ ಈಗಾಗಲೇ ಗಮನ ಸೆಳೆದಿದೆ.



