ವಿಜಯಸಾಕ್ಷಿ ಸುದ್ದಿ, ಗದಗ: ನಗರದ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆ ಹಾಗೂ ಜಿಲ್ಲಾ ಕ್ರೀಡಾಂಗಣಕ್ಕೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಶುಕ್ರವಾರ ದಿಢೀರ್ ಭೇಟಿ ನೀಡಿ ಆಸ್ಪತ್ರೆ ಮತ್ತು ಕ್ರೀಡಾ ವಸತಿ ಶಾಲೆಯಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿದರು.
ಮೊದಲು ಮಹಿಳಾ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಹೆರಿಗೆ ವಾರ್ಡ್‌ನಲ್ಲಿ ದಾಖಲಾಗಿದ್ದ ಬಾಣಂತಿಯರೊಂದಿಗೆ ಸಂವಾದ ನಡೆಸಿ ಚಿಕಿತ್ಸೆ, ಆಹಾರ ಹಾಗೂ ಆಸ್ಪತ್ರೆಯಲ್ಲಿ ಒದಗಿಸಲಾಗುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಆಸ್ಪತ್ರೆಯ ಲಿಫ್ಟ್ ಅನ್ನು ಶೀಘ್ರ ದುರಸ್ತಿಗೊಳಿಸುವಂತೆ ಸೂಚಿಸಿದ ಅವರು, ಆಸ್ಪತ್ರೆ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆಸ್ಪತ್ರೆಯ ದುರಸ್ತಿಗೆ ಸಂಬಂಧಿಸಿದ ಕ್ರಿಯಾ ಯೋಜನೆಯ ಪ್ರತಿಯನ್ನು ಸಲ್ಲಿಸುವಂತೆ ಸೂಚಿಸಿದ ಅವರು, ಸಿಬ್ಬಂದಿಗಳ ಹಾಜರಾತಿ ವಹಿ, ಔಷಧ ಉಗ್ರಾಣ ಹಾಗೂ ವಿವಿಧ ವಿಭಾಗಗಳನ್ನು ಪರಿಶೀಲಿಸಿದರು.
ಬಳಿಕ ಜಿಲ್ಲಾ ಕ್ರೀಡಾಂಗಣದ ಕ್ರೀಡಾ ವಸತಿ ಶಾಲೆಗೆ ಭೇಟಿ ನೀಡಿದ ಉಪಲೋಕಾಯುಕ್ತರು, ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಊಟ, ಉಪಹಾರ ಮತ್ತು ಕ್ರೀಡಾ ತರಬೇತಿ ಕುರಿತು ಮಾಹಿತಿ ಪಡೆದರು.
ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು.
ಮಕ್ಕಳು ತಮ್ಮ ಸಮಸ್ಯೆಗಳನ್ನು ಧೈರ್ಯವಾಗಿ ಹೇಳಿಕೊಂಡರೆ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಕ್ರೀಡಾ ಕ್ಷೇತ್ರದ ಸಾಧಕರನ್ನು ಆದರ್ಶವಾಗಿಟ್ಟುಕೊಂಡು ಉತ್ತಮ ಸಾಧನೆ ಮಾಡುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯಾಧೀಶರು ಹಾಗೂ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ, ಸುನೀಲಕುಮಾರ್ ಆರ್., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೋಗೇರಿ ಉಪಸ್ಥಿತರಿದ್ದರು.
“ಆಸ್ಪತ್ರೆ ಮತ್ತು ಕ್ರೀಡಾ ವಸತಿ ಶಾಲೆಗಳಲ್ಲಿ ಮೂಲಸೌಲಭ್ಯಗಳಿಗೆ ಆದ್ಯತೆ ನೀಡಿ, ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು.”
– ಕೆ.ಎನ್. ಫಣೀಂದ್ರ, ಉಪಲೋಕಾಯುಕ್ತ ನ್ಯಾಯಮೂರ್ತಿಗಳು



