ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಗೌರಿ-ಗಣೇಶ ಹಬ್ಬದ ಸಡಗರದಲ್ಲಿರುವ ಸಿನಿರಸಿಕರಿಗೆ ಬಹುನಿರೀಕ್ಷಿತ ಕನ್ನಡ ಚಿತ್ರ ‘ವಕ್ರತುಂಡ’ ತಂಡ ಭರ್ಜರಿ ಹಬ್ಬದ ಉಡುಗೊರೆ ನೀಡಿದೆ. ಚಿತ್ರದ ಹೈ-ಎನರ್ಜಿ ಹಾಗೂ ಭಕ್ತಿಭಾವದ ವಿಡಿಯೋ ಟೈಟಲ್ ಟ್ರ್ಯಾಕ್ ‘ಜೈ ಗಣೇಶ’ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಸದ್ದು ಮಾಡುತ್ತಿದೆ.
ಲೋಚನ್ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಅದ್ದೂರಿಯಾಗಿ ಮೂಡಿಬಂದಿರುವ ಈ ಹಾಡಿಗೆ ಪ್ರತಿಭಾವಂತ ಸಂಗೀತ ನಿರ್ದೇಶಕ ಜೇಮ್ಸ್ ಆರ್ಕಿಟೆಕ್ಟ್ ಮಾಸ್ ಮತ್ತು ಕ್ಲಾಸ್ ಶೈಲಿಯಲ್ಲಿ ರಾಗ ಸಂಯೋಜನೆ ಮಾಡಿದ್ದಾರೆ. ಹಬ್ಬದ ಜೋಶ್ ಹೆಚ್ಚಿಸುವ ಸಾಹಿತ್ಯವನ್ನು ರಾಘವ ರಂಜನ್ ಬರೆದಿದ್ದು, ಖ್ಯಾತ ಗಾಯಕ ಶಶಾಂಕ್ ಶೇಷಗಿರಿ ತಮ್ಮ ಕಂಠಸಿರಿಯಿಂದ ಹಾಡಿಗೆ ಜೀವ ತುಂಬಿದ್ದಾರೆ.
ಮಾಸ್ಟರ್ ಕೊರಿಯೋಗ್ರಾಫರ್ ಕಂಬಿ ರಾಜು ಅವರ ನೃತ್ಯ ನಿರ್ದೇಶನ, ಛಾಯಾಗ್ರಾಹಕ ಜೈ ಆನಂದ ಅವರ ಛಾಯಾಗ್ರಹಣ ಹಾಗೂ ಎಡಿಟರ್ ರವಿ ತೇಜ ಅವರ ಸಂಕಲನ ಹಾಡಿನ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರತಿಭಾವಂತ ನಿರ್ದೇಶಕ ಹರೀಶ್ ಕುಂದುರ್ ಆಕ್ಷನ್-ಕಟ್ ಹೇಳಿದ್ದಾರೆ.
ಈ ಹಿಂದೆ ನೈಂಟಿಕುಡಿ ಪಲ್ಟಿ ಹೊಡಿ, ದೇವರಾಣೆ, ಸಿಗರೇಟ್ ಸೇದ್ಬೇಡಿ, ಜಿಲೇಬಿ ಚಿತ್ರಗಳನ್ನು ನಿರ್ಮಿಸಿದ್ದ ಲಕ್ಕಿ ಶಂಕರ್ (ಶಂಕರ್ ಎಸ್.) ಕಥೆ ಬರೆದು ಚಿತ್ರವನ್ನು ನಿರ್ಮಿಸಿದ್ದಾರೆ. ಉಮೇಶ್ ಬಿ.ಹೆಚ್. ದಾವಣಗೆರೆ ಸಹ-ನಿರ್ಮಾಪಕರಾಗಿದ್ದಾರೆ. ನಾಗೇಂದ್ರ, ಡಾ. ಪ್ರಭು ಗಂಜಿಹಾಳ್ ಹಾಗೂ ಡಾ. ವೀರೇಶ್ ಹಂಡಿಗಿ ಪಿಆರ್‌ಒಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಚಿತ್ರದ ತಾರಾಬಳಗದಲ್ಲಿ ರಚಿತಾ ಮಹಾಲಕ್ಷ್ಮಿ, ಲಕ್ಕಿ ಶಂಕರ್, ಉಮೇಶ್ ಬಿ.ಹೆಚ್. ದಾವಣಗೆರೆ, ಮೂಗು ಸುರೇಶ್, ಸಂಗಮೇಶ್ ಕಾಸ್, ಅಮಿತ್ ರಾವ್, ಆಟೋ ನಾಗರಾಜ್, ಭುವನ ಹರೀಶ್ ಹಾಗೂ ಮೋಹನಕೃಷ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸದ್ಯದಲ್ಲೇ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿರುವ ‘ವಕ್ರತುಂಡ’ ಚಿತ್ರದ ‘ಜೈ ಗಣೇಶ’ ವಿಡಿಯೋ ಹಾಡು ಯೂಟ್ಯೂಬ್‌ನಲ್ಲಿ ಸಿನಿರಸಿಕರ ಗಮನ ಸೆಳೆಯುತ್ತಿದ್ದು, ಗಣೇಶೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದಿದೆ.



