ಧಾರವಾಡ: ಬಹು ಚರ್ಚಿತ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು ಹೊರಬಂದ ಹಿನ್ನೆಲೆ, ಮೃತ ಯೋಗೀಶ್ ಗೌಡ ಅವರ ಪತ್ನಿ ಮಲ್ಲಮ್ಮ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ತೀರ್ಪಿನ ಬಗ್ಗೆ ಮಾತನಾಡಿದ ಮಲ್ಲಮ್ಮ, “ನಾನು ಹತ್ತು ವರ್ಷಗಳ ಕಾಲ ಅನುಭವಿಸಿದ ಕಷ್ಟಕ್ಕೆ ಇಂದು ನ್ಯಾಯ ಸಿಕ್ಕಿದೆ. ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇನೆ. ಆದರೆ ಈ ತೀರ್ಪು ನನ್ನ ನೋವನ್ನು ಸಂಪೂರ್ಣವಾಗಿ ಕಡಿಮೆ ಮಾಡಿಲ್ಲ” ಎಂದು ಭಾವುಕರಾಗಿ ಹೇಳಿದರು.
“ನನ್ನ ಗಂಡನ ಸ್ಥಾನದಲ್ಲಿ ನನ್ನ ಮಗ ಬೆಳೆದು ನಿಲ್ಲಬೇಕು. ನಮ್ಮ ಕ್ಷೇತ್ರದ ಜನರು ಅವನನ್ನು ಬೆಂಬಲಿಸಬೇಕು. ನನ್ನ ಗಂಡನಂತೆ ಅವನು ದೊಡ್ಡವನಾಗಬೇಕು. ಆಗ ಮಾತ್ರ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ” ಎಂದು ಅವರು ಆಶಯ ವ್ಯಕ್ತಪಡಿಸಿದರು.
ಹತ್ತು ವರ್ಷಗಳ ಹೋರಾಟದ ಕುರಿತು ಮಾತನಾಡಿದ ಮಲ್ಲಮ್ಮ, “ನಾನು ಎಷ್ಟು ಕಷ್ಟಪಟ್ಟು ಮಕ್ಕಳನ್ನು ಬೆಳೆಸಿದ್ದೇನೆ ಎನ್ನುವುದು ನನಗೆ ಮಾತ್ರ ಗೊತ್ತು. ನನ್ನ ಮೇಲೆ ಹಲವು ಆರೋಪಗಳು, ನಿಂದನೆಗಳು ಬಂದವು. ಆದರೆ ಇಂದು ಆ ಎಲ್ಲವನ್ನು ಕ್ಷಮಿಸಿ ಬಿಡುತ್ತೇನೆ” ಎಂದರು. ನಮ್ಮದು ಪ್ರೇಮ ವಿವಾಹವಾಗಿದ್ದರಿಂದ ನನ್ನ ಗಂಡನ ಮನೆಯವರು ಅಥವಾ ನನ್ನ ತವರು ಮನೆಯವರು ಯಾರೂ ಸಹಾಯಕ್ಕೆ ಬರಲಿಲ್ಲ. ನನ್ನ ಕ್ಷೇತ್ರದ ಜನರು ಮಾತ್ರ ನನಗೆ ಬೆನ್ನೆಲುಬಾಗಿ ನಿಂತಿದ್ದಾರೆ. ನನ್ನ ಗಂಡ ಸುಮಾರು 28 ಲಕ್ಷ ಸಾಲ ಮಾಡಿಕೊಂಡಿದ್ದರು. ಅದನ್ನೆಲ್ಲ ತೀರಿಸಿ ನಾನು ಮಕ್ಕಳನ್ನು ಬೆಳೆಸಿಕೊಂಡು ಬಂದಿದ್ದೇನೆ” ಎಂದು ತಿಳಿಸಿದರು.
ರಾಜಕೀಯ ಪ್ರವೇಶದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಲ್ಲಮ್ಮ, “ನಾನು ರಾಜಕೀಯಕ್ಕೆ ಬರುವುದಕ್ಕಿಂತ ನನ್ನ ಮಕ್ಕಳು ಬಂದರೆ ನನಗೆ ಸಂತೋಷ. ನನ್ನ ಮಗನನ್ನು ಜಿಲ್ಲಾಪಂಚಾಯಿತಿ ಚುನಾವಣೆಯಲ್ಲಿ ನಿಲ್ಲಿಸುವ ಆಸೆ ಇದೆ. ಅವನ ವಿದ್ಯಾಭ್ಯಾಸ ಪೂರ್ಣವಾದ ಬಳಿಕ ಕ್ಷೇತ್ರದ ಜನರು ನಿರ್ಧಾರ ಮಾಡಲಿ” ಎಂದು ಹೇಳಿದರು.
ಒಟ್ಟಾರೆ, ದಶಕದ ಹೋರಾಟದ ಬಳಿಕ ತೀರ್ಪು ಬಂದಿದ್ದರೂ, ಮಲ್ಲಮ್ಮ ಅವರ ಮನದ ನೋವು ಮತ್ತು ಭವಿಷ್ಯದ ಆಶೆಗಳು ಈ ಹೇಳಿಕೆಯಲ್ಲಿ ವ್ಯಕ್ತವಾಗಿವೆ.



