ಗಂಗಾವತಿ ಅಕ್ಕಿ ಕುಳಗಳ ಮೇಲೆ “ಕೆಂಗಣ್ಣು”
*ಕೆಡಿಪಿ ಸಭೆಯಲ್ಲಿ ವಿಜಯಸಾಕ್ಷಿ ವರದಿ ಪ್ರಸ್ತಾಪ.
*ವಾರದೊಳಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲು ಸೂಚನೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಅಕ್ಕಿ ಅಕ್ರಮ ನಡೆಯುತ್ತಿರುವುದು ಜಗಜ್ಜಾಹೀರಾಗಿದೆ. ಕಳೆದ ೫ ತಿಂಗಳ ಹಿಂದೆ ನಡೆದ ಪಡಿತರ ಅಕ್ಕಿ ಕಳ್ಳ ಸಾಗಣೆ ಬಗ್ಗೆ ಅಧಿಕಾರಿಗಳ ಉದಾಸೀನ ಧೋರಣೆ ಬಗ್ಗೆ ಸಚಿವ ಬಿ.ಸಿ.ಪಾಟೀಲ ಕೆಂಡಾಮಂಡಲರಾದ ಘಟನೆ ಕೊಪ್ಪಳದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ನಡೆಯಿತು.
ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಅಕ್ರಮಗಳಿಗೆ ಬ್ರೇಕ್ ಹಾಕುವುದು ನನ್ನ ಜವಾಬ್ದಾರಿ. ಇದಕ್ಕೆ ಅಧಿಕಾರಿಗಳ ಸಹಕಾರ ಅತ್ಯಗತ್ಯ ಎಂದು ಮೇ ತಿಂಗಳಲ್ಲಿ ನಡೆದ ಕೆಡಿಪಿ ಸಭೆಯಲ್ಲೇ ಹೇಳಿದ್ದೆ. ಏಪ್ರಿಲ್-ಮೇ ನಲ್ಲಿ ಗಂಗಾವತಿಯ ಅಕ್ಕಿ ವಿವಿಧೆಡೆ ಪತ್ತೆಯಾಗಿರುವ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿವೆ. ಎಫ್ಐಆರ್ ಸಹ ಆಗಿವೆ. ಆದರೂ ಇಲಾಖೆ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.
ಸಚಿವರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿ, ಜಿಲ್ಲೆಗೆ ಹೊಸದಾಗಿ ಬಂದು ಎರಡು ತಿಂಗಳಷ್ಟೇ ಆಗಿದೆ. ಈ ಬಗ್ಗೆ ಗಮನ ಹರಿಸುವುದಾಗಿಯೂ, ತಪ್ಪು ಕಂಡು ಬಂದಲ್ಲಿ ಪರವಾನಗಿ ರದ್ದುಗೊಳಿಸುವುದಾಗಿಯೂ ತಿಳಿಸಿದರು.
ಅಧಿಕಾರಿಯ ಸಮಜಾಯಿಷಿಗೆ ಪ್ರತಿಕ್ರಿಯೆ ನೀಡಿದ ಸಚಿವ ಪಾಟೀಲ ರದ್ದುಗೊಳಿಸುವುದಲ್ಲ, ರದ್ದಾಗಲೇಬೇಕು. ಈ ಕುರಿತು ಒಂದು ವಾರದೊಳಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ಮೇ ತಿಂಗಳಲ್ಲಿ ನಡೆದ ಕೆಡಿಪಿ ಸಭೆಯ ಅನುಪಾಲನಾ ವರದಿ ಪರಿಶೀಲಿಸಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಜಿಲ್ಲೆಯಲ್ಲಿ ವಿಶೇಷವಾಗಿ ಗಂಗಾವತಿ ಅಕ್ಕಿಯ ಅಕ್ರಮ ಕುರಿತು ಗಂಭೀರವಾಗಿ ಚರ್ಚಿಸಿ ಅಕ್ರಮ ತಡೆಗೆ ಅಧಿಕಾರಿಗಳು ಮುಂದಾಗಲೇಬೇಕು. ಈ ವಿಷಯದಲ್ಲಿ ಉದಾಸೀನ ಧೋರಣೆ ಸಹಿಸಲ್ಲ ಎಂದು ಎಚ್ಚರಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸೇರಿದಂತೆ ಶಾಸಕರಾದ ರಾಘವೇಂದ್ರ ಹಿಟ್ನಾಳ, ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್, ಅಮರೇಶ್ ಕರಡಿ ಇತರರು ಇದ್ದರು.
ಪ್ರತಿ ಮೀಟಿಂಗ್‌ನಲ್ಲಿ ನಡೆಯುವಂತೆ ಇಂದಿನ ಕೆಡಿಪಿ ಸಭೆಯಲ್ಲೂ ಕೆಲ ಅಧಿಕಾರಿಗಳು ನಿದ್ರೆಗೆ ಜಾರಿದ್ದರು. ಸಭೆಯಲ್ಲಿ ಎತ್ತರದ ಯಾರದಾದರೂ ಧ್ವನಿ ಕಿವಿಗೆ ಬೀಳುತ್ತಲೇ ಹೌಹಾರಿ ಕಣ್ಣು ಬಿಟ್ಟು, ನಿದ್ದೆ ಮಾಡೇ ಇಲ್ಲ ಎನ್ನುವಂತೆ ನಟಿಸುತ್ತಿದ್ದರು. ಇನ್ನೂ ಕೆಲವರು ಅದೇ ಮೊಬೈಲ್ ಟಚ್‌ನಲ್ಲಿ ತಲ್ಲೀನರಾಗಿದ್ದರು.