ವಿಜಯಸಾಕ್ಷಿ ಸುದ್ದಿ, ರಾಯಚೂರು: ಅಕ್ರಮ ಸಂಬಂಧದಲ್ಲಿದ್ದ ಪ್ರೇಮಿಗಳಿಬ್ಬರ ನಡುವೆ ವೈಮನಸ್ಸು ಬಂದ ಕಾರಣಕ್ಕೆ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಹೇಮನಾಳ ಗ್ರಾಮದಲ್ಲಿ ನಡೆದಿದೆ.
ರಂಗಣ್ಣ ನಾಯಕ್ ( 30), ರಂಗಮ್ಮ(18) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಮದುವೆಯಾಗಿ ಆರು ವರ್ಷವಾದರೂ ರಂಗಣ್ಣ ನಾಯಕ್ ಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಚಪ್ಪರ ಗುಂಡಿ ಮಸೀದಿ ಗ್ರಾಮದ ರಂಗಮ್ಮ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ.
ರಂಗಮ್ಮ ಸಹ ವಿವಾಹವಾಗಿ ಆಕೆಯ ಪತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ. ತವರುಮನೆಯಲ್ಲಿ ಉಳಿದುಕೊಂಡಿದ್ದ ರಂಗಮ್ಮ ರಂಗಣ್ಣ ನಾಯಕ್ ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಜಾತ್ರೆಯ ನಿಮಿತ್ತ ರಂಗಣ್ಣನ ಪತ್ನಿ ಶಿವಮ್ಮ ತನ್ನ ತವರುಮನೆ ಕೊತ್ತದೊಡ್ಡಿ ಗ್ರಾಮಕ್ಕೆ ಹೋಗಿದ್ದಳು.
ಈ ವೇಳೆ ರಂಗಣ್ಣನ ಮನೆಗೆ ರಂಗಮ್ಮ ಬಂದಿದ್ದಾಳೆ. ಪ್ರೇಮಿಗಳ ಮಧ್ಯೆ ವೈಮನಸ್ಸು ಉಂಟಾಗಿ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಪತಿಯ ಸಾವಿನ ಬಳಿಕವಷ್ಟೇ ಪತ್ನಿ ಶಿವಮ್ಮಳಿಗೆ ಪತಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದುಬಂದಿದೆ. ಮೃತನ ಪತ್ನಿ ಶಿವಮ್ಮಳ ಹೇಳಿಕೆ ಆಧಾರದ ಮೇಲೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.