ವಿಜಯಸಾಕ್ಷಿ ಸುದ್ದಿ, ಬೆಳಗಾವಿ
ರೈತ ಚಳುವಳಿ ಬಗ್ಗೆ ಮಾತನಾಡಲ್ಲ, ರೈತರಿಗೆ ನಮ್ಮ ಸರ್ಕಾರ ಸಹಕಾರ ನೀಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡರು.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ರೈತರಿಗೆ ಕಿಸಾನ್ ಸಮ್ಮಾನ್, ಫಸಲ್ ಭೀಮಾ ಯೋಜನೆ ಜಾರಿಗೆ ತರಲಾಗಿದೆ. ಸಾಯಿಲ್ ಹೆಲ್ತ್ ಕಾರ್ಡ್ ಮೂಲಕ ರೈತನ ಆದಾಯ ಡಬಲ್ ಮಾಡಿದ್ದೇವೆ.
ರೈತರು ಸತ್ಯ ಅರಿತುಕೊಳ್ಳಬೇಕು. ಅಲ್ಲದೇ, ಹಿಂದಿನ ಸರ್ಕಾರ ಮಾಡಿರುವ ಕೆಲಸ ನೋಡಿ ಎಂದರು.
ರೈತರಿಗೆ ಅತ್ಯಂತ ಹೆಚ್ಚು ಸಹಕಾರ ನೀಡಿದ್ದು ಬಿಜೆಪಿ, ದಲ್ಲಾಳಿಗಳ ಹಾವಳಿ ತಡೆಯಲು ರಾಜ್ಯ ಸರ್ಕಾರ ಕ್ರಮವಹಿಸಿದೆ. ರೈತರ ಸಂಕಷ್ಟ ನಿವಾರಿಸುವುದೇ ನಮ್ಮಕೆಲಸ ಎಂದರು.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಟ್ಟ ಮೇಲೆ ಒಲೆ ಉರಿತು, ಕೆಟ್ಟ ಮೇಲೆ ಬುದ್ದಿ ಬಂತು ಎಂಬ ಗಾದೆ ಮಾತಿನ ಮೂಲಕ ಕುಮಾರಸ್ವಾಮಿ ಅವರಿಗೆ ಸಿಟಿ ರವಿ ಟಾಂಗ್ ಕೊಟ್ಟರು.
ಕಾಂಗ್ರೆಸ್ ಸಹವಾಸ ಮಾಡಬೇಡಿ, ಅದು ಉರಿಯುವ ಮನೆಯಾಗಿದೆ. ಬಿಜೆಪಿ ರಾಷ್ಟ್ರವಾದಿ ಪಕ್ಷ ದೇಶದ ಪರವಾಗಿದೆ ಎಂದ ಅವರು, ಸಿದ್ದರಾಮಯ್ಯ ಚಿತ್ರ ವಿಚಿತ್ರವಾಗಿ ಮಾತನಾಡುತ್ತಿದ್ದಾರೆ. ಗೋ ಹತ್ಯೆ ಸಂಬಂಧಿಸಿದಂತೆ ಕೆಟ್ಟ ಹೇಳಿಕೆ ಕೊಡುತ್ತಿದ್ದಾರೆ ಎಂದರು.