ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಆರೋಪಿತನು ಅಪಹರಿಸಿ ಬಲಾತ್ಕಾರ ಸಂಭೋಗ ಮಾಡಿದ ಆರೋಪ ಸಾಭಿತಾಗಿದೆ ಎಂದು ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರು (ಪೋಕ್ಸೋ) ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಗ್ರಾಮದ ಶರಣಬಸವ ಬಗಡಿ, ಇತನು ಕೊಪ್ಪಳ ನಗರದ ಕುರುಬರ ಓಣಿಯಲ್ಲಿ ಫಿರ್ಯಾದಿದಾರರು ವಾಸವಿರುವ ಓಣಿಯಲ್ಲಿ ವಾಸವಾಗಿದ್ದು, ಒಂದು ವರ್ಷದ ಹಿಂದೆ ಕೊಪ್ಪಳದಿಂದ ತನ್ನ ಊರು ತಾವರಗೇರಾ ಗ್ರಾಮಕ್ಕೆ ಹೋಗಿದ್ದ. ಆಗಾಗ ಕೊಪ್ಪಳಕ್ಕೆ ಬಂದು ಫಿರ್ಯಾದಿದಾರರ ಅಪ್ರಾಪ್ತ ವಯಸ್ಸಿನ ಮಗಳನ್ನು ಭೇಟಿಯಾಗಿ ಮಾತನಾಡಿಸುತ್ತಾ ಅವಳ ಗೆಳತನ ಸಂಪಾದಿಸಿರುತ್ತಾನೆ.
2016ರ ಮಾರ್ಚ್. 14 ರಂದು ಸಾಯಂಕಾಲ 04-30 ಗಂಟೆ ಸುಮಾರು ಕೊಪ್ಪಳ ನಗರದ ಫಿರ್ಯಾದಿದಾರರ ಮನೆ ಹತ್ತಿರ ಇದ್ದ ಫಿರ್ಯಾದಿದಾರರ ಮಗಳನ್ನು ಆಕೆ ಅಪ್ರಾಪ್ತ ವಯಸ್ಸಿನವಳು ಮತ್ತು ಪರಿಶಿಷ್ಟ ಪಂಗಡದವಳೆಂದು ಗೊತ್ತಿದ್ದು, ಬಾಲಕಿಯನ್ನು ಮದುವೆ ಮಾಡಿಕೊಳ್ಳುತ್ತೆನೆ ಹೋಗೋಣ ಬಾ ಅಂತಾ ಹೇಳಿ ನಂಬಿಸಿ ಪುಸಲಾಯಿಸಿ ಅಪಹರಣ ಮಾಡಿಕೊಂಡು ಆಂದ್ರ ಪ್ರದೇಶ ರಾಜ್ಯದ ಗುಂಟೂರಿನ ಅಮೀನ ನಗರದಲ್ಲಿ ರಾಮಾಂಜನೇಯ ಇತನ ಸಹಾಯದಿಂದ ಶೇಕನಾಗೂರ ಇತನ ಒಂದು ರೂಮ್ ಬಾಡಿಗೆಯಂತೆ ಹಿಡಿದು, ಈ ರೂಮಿನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಅವಳಿಗೆ ಹಲವು ಬಾರಿ ಬಲಾತ್ಕಾರ ಸಂಭೋಗ ಮಾಡಿದ ಆರೋಪವು ತನಿಖೆಯಲ್ಲಿ ಸಾಭಿತಾಗಿದ್ದರಿಂದ ಕೊಪ್ಪಳ ಪೊಲೀಸ್ ಉಪಾಧೀಕ್ಷಕರು ಆರೋಪಿಯ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯಲ್ಲಿ ಆರೋಪಿತನ ಮೇಲಿನ ಆರೋಪಣೆಗಳು ಸಾಬೀತಾಗಿದೆ ಎಂದು ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ರೂ. 25,000 ಗಳ ದಂಡ ವಿಧಿಸಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರಾದ (ಪೋಕ್ಸೋ) ಶಂಕರ ಎಂ. ಜಾಲವಾದಿ ಅವರು ತೀರ್ಪು ಹೊರಡಿಸಿರುತ್ತಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಂ.ಎ ಪಾಟೀಲ, ಕೆ.ನಾಗರಾಜ ಆಚಾರ್, ಸವಿತಾ ಎಂ. ಶಿಗ್ಲಿ ಹಾಗೂ ಟಿ.ಅಂಬಣ್ಣ ಇವರು ಪ್ರಕರಣ ನಡೆಸಿದ್ದು, ಬಂಡಿ ಅಪರ್ಣ ಮನೋಹರ ಅವರು ವಾದ ಮಂಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.