ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ರೋಣ: ವಿಪರೀತ ಮಳೆಯಿಂದಾಗಿ ಬೆಳೆಯೆಲ್ಲ ನಾಶವಾಯಿತು. ಹಿಂದಾಗಡೆ ಬಿತ್ತಿದ್ದ ಬೆಳೆ ಜೀವ ಉಳಿಸಿಕೊಂಡಿತ್ತು. ಆದರೆ ಅಳಿದುಳಿದ ಬೆಳೆಗೆ ಮಂಗಗಳು ಮುತ್ತಿಗೆ ಹಾಕಿ, ರೈತರ ಬದುಕಿಗೆ ಕೊಳ್ಳೆ ಇಡುತ್ತಿವೆ. ಮನುಷ್ಯನ ಪೂರ್ವಜನಾದ ಈ ಮಂಗನ ಕಾಟ ತಪ್ಪಿಸಬೇಕಾದ, ‘ಮನುಷ್ಯ’ ಎಂಬ ಕೆಟಗರಿಯಲ್ಲಿರುವ ಜನಪ್ರತಿನಿಧಿಗಳು ಮಾತ್ರ ಮಾಯವಾಗಿ ಬಿಟ್ಟಿದ್ದಾರೆ.
ತಾಲೂಕಿನ ಮಾರನಬಸರಿ ಗ್ರಾಮದಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಕಂಗಾಲಾಗಿರುವ ರೈತರಿಗೆ ಈಗ ಮಂಗಗಳ ಕಾಟ ಶುರುವಾಗಿದ್ದು ಇದರಿಂದ ಗ್ರಾಮದ ರೈತರು ಬೆಚ್ಚಿ ಬಿದ್ದಿದ್ದಾರೆ.
ಕಳೆದ ವಾರದಿಂದ ಗ್ರಾಮದಲ್ಲಿ ಮಳೆರಾಯ ತನ್ನ ಆರ್ಭಟ ತೋರಿಸುತ್ತ ಸಾಗಿದ್ದು, ಇನ್ನೂ ಮಳೆಯು ಕಾಟ ತಪ್ಪಿಲ್ಲ. ಇದರ ಜೊತೆಗೆ ಈಗ ಮಂಗಗಳ ಕಾಟ ಆರಂಭಗೊಂಡಿದ್ದು ರೈತರು ತಮ್ಮ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಹೆಣಗಾಡುವಂತಹ ಸ್ಥಿತಿ ಗ್ರಾಮದಲ್ಲಿ ನಿರ್ಮಾಣವಾಗಿದೆ.
ಗ್ರಾಮದಲ್ಲಿ ಅತಿಯಾದ ಮಳೆಯಿಂದ ಜಮೀನುಗಳಲ್ಲಿರುವ ಬೆಳೆಗಳಿಗೆ ತಂಪು ಹೆಚ್ಚಾಗಿ ಕೊಳೆಯುವ ಸ್ಥಿತಿ ಬಂದಿದ್ದು, ಬೆಳೆಗಳಿಗೆ ರೋಗ ಸಹ ತಗುಲಿಕೊಂಡಿದೆ. ವಿಪರೀತ ಮಳೆಗೆ ತಾಲೂಕಿನ ಕೆಲ ಗ್ರಾಮಗಳು ಸಹ ತತ್ತರಿಸಿದ್ದು ಹೋಗಿವೆ.
ಈ ಬಾರಿಯೂ ಈರುಳ್ಳಿ, ಮೆಣಸಿನಕಾಯಿ ಬೆಳೆ ಸಂಪೂರ್ಣ ಕೈ ಕೊಡುವ ಲಕ್ಷಣಗಳನ್ನು ಹೊಂದಿವೆ. ಇನ್ನೊಂದು ಕಡೆ, ಮಂಗಗಳ ಹಾವಳಿಗೆ ಜಮೀನುಗಳಲ್ಲಿರುವ ಬೆಳೆಗಳು ಉಳಿಯುತ್ತಿಲ್ಲ. ಮನೆಗಳಲ್ಲಿರುವ ಸರಂಜಾಮುಗಳು ಉಳಿಯುತ್ತಿಲ್ಲ. ಹೀಗಾಗಿ ಗ್ರಾಮಸ್ಥರು ಕೈಯಲ್ಲಿ ಬಡಿಗೆ ಹಿಡಿದುಕೊಂಡು ಅಡ್ಡಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಮಾಜಿ ಶಾಸಕ ಜಿಎಸ್ ಪಾಟೀಲರು, ರೈತರ ನೆರವಿಗೆ ಬರಬೇಕು ಎಂದು ಆಡಳಿತವನ್ನು ಎಚ್ಚರಿಸಿದ್ದಾರೆ. ರೋಣದ ತಹಸೀಲ್ದಾರ್ ಜಕ್ಕನಗೌಡ್ರ ಮಾತ್ರ ಬಹುತೇಕ ತಹಸೀಲ್ದಾರ್ ಸಾಹೇಬರು ಬಾಯಿಪಾಠ ಮಾಡಿಕೊಂಡೇ ಬಂದಿರುವ, ‘ಗಮನಕ್ಕೆ ಬಂದಿದೆ. ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂಬ ತಥಾಗತಿಥ ಡೈಲಾಗ್ ಹೊಡೆದಿದ್ದಾರೆ.
‘ಮಂಗಗಳೇ ವಾಸಿ ಬಿಡಿ’ ಎಂದು ಗ್ರಾಮಸ್ಥರು ಅಂದುಕೊಂಡರೆ, ಅದಕ್ಕಿನ್ನ ಅಸಹ್ಯ ಈ ಡೆಮಾಕ್ರಸಿಗೆ ಇನ್ ಏನಿದೆ?